ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವವು ಶುಕ್ರವಾರ ಹಾಗೂ ಶನಿವಾರಗಳಂದು ವಿಜೃಂಭಣೆಯಿಂದ ಜರಗಿತು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ, ಶತರುದ್ರಾಭಿಷೇಕ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆಯಲ್ಲಿ ಊರಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು. ಸಂಜೆ ದೀಪಾರಾಧನೆ, ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ, ರಾತ್ರಿ ಶ್ರೀ ದೇವರ ಬಲಿ ಉತ್ಸವ, ನವಕಾಭಿಷೇಕ, ವಸಂತಪೂಜೆ ಹಾಗೂ ಶ್ರೀಭೂತಬಲಿ ಜರಗಿತು. ಬ್ರಹ್ಮವಾಹಕರಾಗಿ ಗಿರೀಶ್ ಮಯ್ಯ ಕಾಟುಕುಕ್ಕೆ ಸಹಕರಿಸಿದರು.
ಶ್ರೀ ಉದನೇಶ್ವರ ಭಜನ ಸಂಘದ ನೇತೃತ್ವದಲ್ಲಿ ವಿವಿಧ ಭಜನ ಸಂಘಗಳ ಸಹಯೋಗದೊಂದಿಗೆ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಏಕಾಹ ಭಜನೆ ಜರಗಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಯಕ್ಷಮಿತ್ರರು ಮುಜುಂಗಾವು ಇವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ಶ್ರೀ ಉದನೇಶ್ವರ ಯಕ್ಷಗಾನ ಕಲಾಸಂಘ ಪೆರಡಾಲ ಇವರ ಪ್ರಾಯೋಜಕತ್ವದಲ್ಲಿ ಪ್ರಸಿದ್ಧ ಭಾಗವತರುಗಳಾದ ಪಟ್ಲ ಸತೀಶ ಶೆಟ್ಟಿ, ಪದ್ಯಾಣ ಗಣಪತಿ ಭಟ್ ಹಾಗೂ ತಲ್ಪಣಾಜೆ ವೆಂಕಟ್ರಣ ಭಟ್ಟರ ಭಾಗವತಿಕೆಯಲ್ಲಿ ಕದಂಬ ಕೌಶಿಕೆ, ಸೀತಾಕಲ್ಯಾಣ, ಮೈರಾವಣ ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಶನಿವಾರ ಬೆಳಗ್ಗೆ ಬ್ರಹ್ಮವಾಹಕರಾಗಿ ಕೇಶವ ಅಡಿಗ ಕುಂಬಳೆ ಅವರಿಂದ ಶ್ರೀದೇವರ ಬಲಿ ಉತ್ಸವ, ದರುಶನ ಬಲಿ ಜರಗಿತು. ರಾಜಾಂಗಣದಲ್ಲಿ ಬಟ್ಟಲು ಕಾಣಿಕೆ, ಪ್ರಸಾದ, ಮಂತ್ರಾಕ್ಷತೆಯನ್ನು ಊರಪರವೂರ ಭಕ್ತಾದಿಗಳು ಸ್ವೀಕರಿಸಿ ಕೃತಾರ್ಥರಾದರು. ಎರಡೂ ದಿನಗಳ ಶ್ರೀ ದೇವರ ಬಲಿ ಉತ್ಸವದ ವೇಳೆ ಚೆಂಡೆ, ಬೇಂಡು ವಾದ್ಯಗಳ ತಾಳಕ್ಕೆ ತಕ್ಕ ಬೇತಾಳ ಕುಣಿತ ವಿಶೇಷ ಆಕರ್ಷಣೆಯನ್ನು ಪಡೆಯಿತು.