ಕಾಸರಗೋಡು: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಂಸ್ಥೆಯು ಕಾಸರಗೋಡಿನ ಕನ್ನಡ ವಿಭಾಗ ಭಾಷಾ ಅಧ್ಯಯನ ಕೇಂದ್ರ ಕಣ್ಣೂರು ವಿಶ್ವವಿದ್ಯಾಲಯ ಹಾಗೂ ಯಕ್ಷಗಾನ ಸಂಶೋಧನ ಕೇಂದ್ರ ಸರ್ಕಾರಿ ಕಾಲೇಜು ಕಾಸರಗೋಡು ಇವರ ಸಹಯೋಗದೊಂದಿಗೆ ಇಂದು (ಫೆ.13-14)ಹಾಗೂ ನಾಳೆ ಕಾಸರಗೋಡು ವಿದ್ಯಾನಗರದ ಕಣ್ಣೂರು ವಿಶ್ವವಿದ್ಯಾಲಯದ ಚಾಲಾ ವಿಶ್ವವಿದ್ಯಾಲಯ ಆವರಣದಲ್ಲಿ ಗಡಿನಾಡಿನ ಹೆಮ್ಮೆಯ ಯಕ್ಷಕವಿ ವಾಲ್ಮೀಕಿ ಪಾರ್ತಿಸುಬ್ಬನ ಬಗೆಗೆ ಪಾರ್ತಿಸುಬ್ಬ - ಬದುಕು ಬರಹ ದ್ವಿದಿನ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಕಾಸರಗೋಡಿನಲ್ಲಿ ಇದೇ ಮೊದಲಬಾರಿಗೆ ಪಾರ್ತಿಸುಬ್ಬನ ಬದುಕು ಬರಹಗಳ ಬಗ್ಗೆ ದ್ವಿದಿನ ವಿ ಚಾರ ಸಂಕಿರಣ ನಡೆಯಲಿದ್ದು ಎರಡೂ ದಿನಗಳಲ್ಲಿ ಕರ್ನಾಟಕ ಹಾಗೂ ಕಾಸರಗೋಡಿನ ಯಕ್ಷಗಾನ ಹಿರಿಯ ವಿದ್ವಾಂಸರು ಸಂಶೋಧಕರು ಭಾಗವಹಿಸಿ ಐತಿಹಾಸಿಕ ಕಾರ್ಯಕ್ರಮವಾಗಿ ಅನಾವರಣ ಗೊಳ್ಳಲಿದೆ. ಪ್ರಬಂಧÀಮಂಡನೆ, ವಿಚಾರ ವಿಮರ್ಶೆ ಹಾಗೂ ಪಾರ್ತಿಸುಬ್ಬನ ಆಯ್ದ ಹಾಡುಗಳ ಪ್ರಸ್ತುತಿ ಹಾಗೂ ದಾಖಲೀಕರಣ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಎರಡೂ ದಿನಗಳಲ್ಲಿ ರಾತ್ರಿ ಏಳರಿಂದ ಶ್ರೀ ಎಡನೀರು ಮಠದಲ್ಲಿ ಪಾರ್ತಿಸುಬ್ಬನ ರಚನೆಯಿಂದಾಯ್ದ ಪ್ರಸಂಗಗಳ ತಾಳಮದ್ದಳೆ ಹಾಗೂ ಯಕ್ಷಗಾನ ಪ್ರದರ್ಶನ ಜರಗಲಿದೆ.
ಇಂದು ಬೆಳಿಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ಜರಗಲಿದ್ದು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಸಭಾಧ್ಯಕ್ಷತೆ ವಹಿಸುವರು. ಕಣ್ಣೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ವಿ.ಪಿ.ಪಿ.ಮುಸ್ತಾಫ ಉದ್ಘಾಟಿಸುವರು. ಯಕ್ಷಗಾನ ರಂಗದ ಹಿರಿಯ ವಿದ್ವಾಂಸ, ವಿಮರ್ಶಕ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕøತ ಡಾ.ಎಂ ಪ್ರಭಾಕರ ಜೋಷಿ ದಿಕ್ಸೂಚಿ ಭಾಷಣ ಗೈಯ್ಯುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ, ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಎ.ಎಲ್.ಅನಂತ ಪದ್ಮನಾಭ, ಕರ್ನಾಟಕ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ, ರಂಗಕರ್ಮಿ ಕಾಸರಗೋಡು ಚಿನ್ನಾ, ಜಯರಾಮ ಎಡನೀರು ಭಾಗವಹಿಸುವರು. ಕಣ್ಣೂರು ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗ ಭಾರತೀಯ ಭಾಷಾ ಅದ್ಯಯನಾಂಗದ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ,ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟಾರ್ ಎಸ್.ಹೆಚ್.ಶಿವರುದ್ರಪ್ಪ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಉಪಸ್ಥಿತರಿರುವರು.
ಬೆಳಿಗ್ಗೆ 11ರಿಂದ ಪಾರ್ತಿಸುಬ್ಬನ ಕಾಲ ಹಾಗೂ ಕರ್ತೃತ್ವ ಚರ್ಚೆಗಳ ಗೋಷ್ಠಿ ನಡೆಯಲಿದ್ದು ಯಕ್ಷಗಾನ ಹಿರಿಯ ವಿದ್ವಾಂಸ ಡಾ.ಚಂದ್ರಶೇಖರ ದಾಮ್ಲೆ ಅಧ್ಯಕ್ಷತೆ ವಹಿಸುವರು.ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಪ್ರಬಂಧ ಮಂಡಿಸುವರು. ಎರಡನೇ ಗೋಷ್ಠಿ ಪಾರ್ತಿಸುಬ್ಬನ ಬಗೆಗಿನ ಅಧ್ಯಯನಗಳು ಹಾಗೂ ಕೃತಿ ಪ್ರಕಟಣೆಗಳು ವಿಷಯದಲ್ಲಿ ರಾಮಕುಂಜದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗಣರಾಜ ಕುಂಬ್ಳೆ ಪ್ರಬಂಧ ಮಂಡನೆ ಮಾಡುವರು. ಮೂರನೇ ಗೋಷ್ಠಿ ಪಾರ್ತಿಸುಬ್ಬನ ಪದ ಪ್ರಯೋಗ ವೈಶಿಷ್ಟ್ಯಗಳು ವಿóಷಯದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವಾಸುದೇವ ರಂಗ ಭಟ್ ಮಧೂರು ಅವರು ಪ್ರಬಂಧ ಮಂಡನೆ ಗೈಯ್ಯುವರು. ನಾಲ್ಕನೇ ಗೋಷ್ಠಿ ಪಾರ್ತಿಸುಬ್ಬನ ಇತಿಹಾಸ ಹಾಗೂ ಐತಿಹ್ಯಗಳು ವಿಷಯದಲ್ಲಿ ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ ನಾ ಚಂಬಲ್ತಿಮಾರ್ ಪ್ರಬಂಧ ಮಂಡನೆ ನಡೆಸುವರು. ಎರಡೂ ಗೋಷ್ಠಿಗಳ ಅಧ್ಯಕ್ಷತೆಯನ್ನು ಡಾ.ಯು.ಶಂಕರನಾರಾಯಣ ಭಟ್ ವಹಿಸುವರು.
ನಾಳೆ(ಫೆ. 14ರಂದು) ಕಾಸರಗೊಡು ಸರ್ಕಾರಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಕಮಲಾಕ್ಷ ಅವರ ಅಧ್ಯಕ್ಷತೆಯಲ್ಲಿ ಪಾರ್ತಿಸುಬ್ಬನ ಕೃತಿ ಪರಿಚಯ ವಿಷಯದ ಮೇಲೆ ವಿದ್ವಾಂಸ ಡಾ. ಆನಂದರಾಮ ಉಪಾಧ್ಯ ಪ್ರಬಂಧ ಮಂಡಿಸುವರು. ಶ್ರೀಧರ ಡಿ.ಎಸ್.ಅವರು ಪಾರ್ತಿಸುಬ್ಬನ ಮಟ್ಟುಗಳು ವಿಷಯದ ಮೇಲೆ ಪ್ರಬಂಧ ಮಂಡಿಸಲಿದ್ದು ದಾಖಲೀಕರಣ ಪ್ರಸ್ತುತಿ ಭಾಗವಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಬಲಿಪ ಶಿವಶಂಕರ ಭಟ್ ಮತ್ತು ಬಳಗದವರಿಂದ ಹಾಡುಗಳ ಪ್ರಸ್ತುತಿ ಹಾಗೂ ದಾಖಲೀಕರಣ ನಡೆಯಲಿದೆ. ಅಪರಾಹ್ನ ಹಿರಿಯ ವಿದ್ವಾಂಸ ಡಾ.ರಾಘವ ನಂಬಿಯಾರ್ ಅವರ ಅಧ್ಯಕ್ಷತೆಯಲ್ಲಿ ಪಾರ್ತಿಸುಬ್ಬನ ರಾಮಾಯಣ ಪ್ರಸಂಗಗಳು ವಿಷಯದ ಮೇಲೆ ಡಾ.ಧನಂಜಯ ಕುಂಬಳೆ ಪ್ರಬಂಧ ಮಂಡಿಸುವರು. ಅಪರಾಹ್ನ 3 ರಿಂದ ಸಮಾರೋಪ ಸಮಾರಂಭ ಜರಗಲಿದ್ದು ಕರ್ನಾಟಕ ಯಕ್ಷಗಾನ-ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಸಮಾರೋಪ ಭಾಷಣ ಗೈಯ್ಯುವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಸಭಾ ಅಧ್ಯಕ್ಷತೆ ವಹಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ. ಸಾಲಿಯಾನ್ , ಹಿರಿಯ ಅರ್ಥಧಾರಿಗಳು ಹಾಗೂ ಯಕ್ಷಗಾನ ವಿದ್ವಾಂಸ ಡಾ.ರಮಾನಂದ ಬನಾರಿ, ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತ, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಮಾಜಿ ಕಾರ್ಯದರ್ಶಿ ಸತೀಶ ಅಡಪ ಸಂಕಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಚಾರ ಸಂಕಿರಣದ ಭಾಗವಾಗಿ ಫೆಬ್ರವರಿ 13ರರಂದು ರಾತ್ರಿ 7.30ರಿಂದ ಎಡನೀರು ಮಠದಲ್ಲಿ ನಾಗರಾಜ ಪದಕಣ್ಣಾಯ ಮತ್ತು ಬಳಗದವರಿಂದ ಪಾರ್ತಿಸುಬ್ಬ ವಿರಚಿತ ವಾಲಿ ಮೋಕ್ಷ ತಾಳಮದ್ದಳೆ ಜರಗಲಿದ್ದು, ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆಮದ್ದಳೆಯಲ್ಲಿ ಭಾಸ್ಕರ ಕೋಳ್ಯೂರು ಹಾಗೂ ರೋಹಿತ್ ಉಚ್ಚಿಲ ಭಾಗವಹಿಸುವರು. ಅರ್ಥಧಾರಿಗಳಾಗಿ ಡಾ.ರಮಾನಂದ ಬನಾರಿ, ರಾಧಾಕೃಷ್ಣ ಕಲ್ಚಾರ್, ಸದಾಶಿವ ಆಳ್ವ ತಲಪಾಡಿ, ನಾಗರಾಜ ಪದಕಣ್ಣಾಯ ಭಾಗವಹಿಸುವರು.
ನಾಳೆ ಸಂಜೆ 6ಕ್ಕೆ ವಿಠಲ ಭಟ್ ಮೊಗಸಾಲೆ ಕೋಳ್ಯೂರು ಮತ್ತು ಬಳಗದವರಿಂದ ಯಕ್ಷಗಾನ ಬಯಲಾಟ ಪಾರ್ತಿಸುಬ್ಬ ರಚಿತ ಪಂಚವಟಿ ಜರಗಲಿದ್ದು, ಹಿಮ್ಮೇಳದಲ್ಲಿ ಭಾಗವತರು ದೇವಿಪ್ರಸಾದ್ ಆಳ್ವ ತಲಪಾಡಿ, ಚೆಂಡೆ ಮದ್ದಳೆಯಲ್ಲಿ ಮುರಾರಿ ಕಡಂಬಳಿತ್ತಾಯ, ಲವ ಕುಮಾರ್ ಐಲ ಭಾಗವಹಿಸುವರು. ಪಾತ್ರಧಾರಿಗಳಾಗಿ ತಾರಾನಾಥ ಬಲ್ಯಾಯ ವರ್ಕಾಡಿ, ಗುಂಡಿಮಜಲು ಗೋಪಾಲ ಭಟ್, ಕಿರಣ ಕುದ್ರೆಕೋಡ್ಲು, ಉಬರಡ್ಕ ಉಮೇಶ ಶೆಟ್ಟಿ, ಕು.ಆಜ್ಞಾಸೋಹಂ, ದೇವಕಾನ ಶ್ರೀಕೃಷ್ಣ ಭಟ್, ಸತೀಶ ಅಡಪ ಸಂಕಬೈಲು ಭಾಗವಹಿಸುವರು ಎಂದು ಕರ್ನಾಟಕ ಯಕ್ಷಗನ ಅಕಾಡೆಮಿ ಪ್ರಕಟಣೆ ತಿಳಿಸಿದೆ.