ಕುಂಬಳೆ: ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರ ಪರಿಸರದಲ್ಲಿ ಏ.10 ರಿಂದ 12ರ ವರೆಗೆ ಅಭೂತಪೂರ್ವವಾಗಿ ಹಮ್ಮಿಕೊಳ್ಳಲಾಗುವ ಕನ್ನಡ ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ವಿವಿಧೆಡೆ ಸ್ಥಳೀಯ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಶನಿವಾರ ಸಂಜೆ ಹೊಸದುರ್ಗ ಸಮಿತಿಯ ರೂಪೀಕರಣ ಸಭೆ ಕಾಞಂಗಾಡ್ ಶ್ರೀಕೃಷ್ಣ ಮಂದಿರದಲ್ಲಿ ನಡೆಯಿತು.
ನಿವೃತ್ತ ಶಿಕ್ಷಕ ಲಕ್ಷ್ಮಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಕಸಾಪ ಗಡಿನಾಡು ಜಿಲ್ಲಾಧ್ಯಕ್ಷ ಎಸ್.ವಿ.ಭಟ್, ಕನ್ನಡ ಸಿರಿ ಸಮ್ಮೇಳನದ ಕಾರ್ಯಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಉಪಸ್ಥಿತರಿದ್ದು ಮಾಹಿತಿ ನೀಡಿದರು. ಬಾಲಕೃಷ್ಣ ಮಾಸ್ತರ್, ಶಿಕ್ಷಕಿ ಭಾರತೀ ಶೆಣೈ, ಎಚ್.ಆರ್.ರವೀಂದ್ರನಾಥ್, ಇ.ವಿ.ಭಟ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಹೊಸದುರ್ಗ ತಾಲೂಕು ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಯು.ಬಿ.ಕುಣಿಕುಳ್ಳಾಯ, ಅಧ್ಯಕ್ಷರಾಗಿ ಎಚ್.ಎಸ್.ಭಟ್, ಉಪಾಧ್ಯಕ್ಷರುಗಳಾಗಿ ರವೀಂದ್ರ ಎಚ್.ಆರ್., ಜಗದೀಶ, ಶಂಕರ ಹೆಗಡೆ, ಕಾರ್ಯದರ್ಶಿಯಾಗಿ ಬಾಲಕೃಷ್ಣ ಮಾಸ್ತರ್, ಜೊತೆ ಕಾರ್ಯದರ್ಶಿಗಳಾಗಿ ಶಶಿಕಲಾ ಟೀಚರ್, ಸುನಿಲ್ ಕುಮಾರ್, ಸಂಚಾಲಕರಾಗಿ ರಾಜೇಶ್ ಎಸ್.ಪಿ., ಸಹ ಸಂಚಾಲಕರಾಗಿ ವಿರೂಪಾಕ್ಷ ಅವರನ್ನು ಆರಿಸಲಾಯಿತು.
ಕನ್ನಡ ಸಿರಿ ಸಮ್ಮೇಳನದ ಯಶಸ್ವಿಗಾಗಿ ಜಿಲ್ಲೆಯ ದಕ್ಷಿಣ ಗಡಿ ಪ್ರದೇಶದಿಂದ ಗರಿಷ್ಠ ಸಂಖ್ಯೆಯ ಕನ್ನಡ ಭಾಷಾಭಿಮಾನಿಗಳನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಲ್ಲಾ ಸಹಕಾರವನ್ನು ನೀಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಬಾಲಕೃಷ್ಣ ಮಾಸ್ತರ್ ಸ್ವಾಗತಿಸಿ, ರಾಜೇಶ್ ವಂದಿಸಿದರು.