ಕಾಸರಗೋಡು: ವರ್ತಮಾನದ ಮತ-ಧರ್ಮಗಳ ತಲ್ಲಣಗಳ ಮಧ್ಯೆ ಇಲ್ಲೊಬ್ಬರು ತಮ್ಮ ಮನೆಯಲ್ಲಿ ಸ್ವತಃ ಮಗಳಂತೆಯೇ ಸಾಕಿದ ಕೆಲಸದಾಳಿನ ಪುತ್ರಿಯನ್ನು ಆಕೆಯ ಧರ್ಮದ ಯುವಕನೊಂದಿಗೇ ವಿವಾಹ ಮಾಡಿಸಿ ಆದರ್ಶ ಮೆರೆದ ಘಟನೆ ಬೇರೆಲ್ಲೋ ಅಲ್ಲ; ಕಾಸರಗೋಡಿನಲ್ಲಿ ಭಾನುವಾರ ನಡೆದಿದೆ.
ಕಾಸರಗೊಡಿನ ಪ್ರತಿಷ್ಠಿತ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿದ್ದ ಹಿಂದೂ ಯುವತಿಯನ್ನು ಹಿಂದೂ ಆಚಾರ ಪದ್ದತಿಯಂತೆ ಹಿಂದೂ ಯುವಕನಿಗೆ ಸ್ವತಃ ಧಾರೆ ಎರೆದು ವಿವಾಹ ಮಾಡಿಸಿಕೊಟ್ಟು ಮಾದರಿಯಾದರು. ಕಾಸರಗೋಡಿನ ಅಬ್ದುಲ್ಲ ಎಂಬವರ ಮನೆಯಲ್ಲಿ ಕೆಲಸಕ್ಕಿದ್ದ ತಮಿಳುನಾಡಿನ ದಂಪತಿಗಳು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಈ ಸಂದರ್ಭ ಇವರ ಜೊತೆಗಿದ್ದ ಇವರ ಪುತ್ರಿ ರಾಜಶ್ರೀಯನ್ನು ಆ ಬಳಿಕ ಅಬ್ದುಲ್ಲ ಅವರೇ ಸ್ವತಃ ಮಗಳಂತೆ ಸಾಕಿದ್ದರು. ರಾಜಶ್ರೀಯ ಸಂಬಂಧಿಕರು ತಮಿಳುನಾಡಿಗೆ ಕರೆದೊಯ್ಯಲು ಪ್ರಯತ್ನಿಸಿದಾದರೂ ರಾಜಶ್ರೀ ಒಪ್ಪಿರಲಿಲ್ಲ.
ಇದೀಗ ಪ್ರಾಪ್ತ ವಯಸ್ಸಿಗೆ ಬಂದ ರಾಜಶ್ರೀಯನ್ನು ಭಾನುವಾರ ಕಾಂಞಂಗಾಡಿನ ವಿಷ್ಣು ಪ್ರಸಾದ್ ಎಂಬವರೊಂದಿಗೆ ಕಾಞಂಗಾಡ್ ಮಾನ್ಯೋಟ್ ಭಗವತಿ ಕ್ಷೇತ್ರದಲ್ಲಿ ವಿವಾಹಗೈದು ಕೃತಾರ್ಥರಾದರು. ರಾಜಶ್ರೀಗೆ ಅಗತ್ಯದ ಶಿಕ್ಷಣವನ್ನು ನೀಡಿರುವ ಅಬ್ದುಲ್ಲ, ವಿವಾಹದ ಸಂಪೂರ್ಣ ವೆಚ್ಚ ಭರಿಸಿದ್ದರು. ಪತ್ನಿ ಖದೀಜಾ ಅವರೊಂದಿಗೆ ಕ್ಷೇತ್ರದ ವಿವಾಹ ಸಭಾಂಗಣದಲ್ಲಿ ಹಿಂದೂ ಆಚಾರ ಸಂಪ್ರದಾಯದಂತೆ ಮುಸ್ಲಿಂ ದಂಪತಿಗಳು ಮುಂದೆ ನಿಂತು ಈ ವಿವಾಹವನ್ನು ಸಮರ್ಥವಾಗಿ ನಿಭಾಯಿಸಿ ಮಾದರಿಯಾದರು.
ಸಮರಸ ಸುದ್ದಿಯೊಂದಿಗೆ ಮಾತನಾಡಿದ ಅಬ್ದುಲ್ಲ ಅವರು ಮುಸ್ಲಿಂ ಪವಿತ್ರ ಗ್ರಂಥವಾದ ಖುರಾನ್ ತನಗೆ ಬೋಧಿಸಿರುವುದು ನಿರ್ಮಲ ಅಂತಃಕರಣದ ಪ್ರೀತಿ, ಆರ್ತರಿಗೆ ನೆರವು ಮತ್ತು ಪರಧರ್ಮ ಸಹಿಷ್ಣುತೆಯಾಗಿದೆ. ತನ್ನ ಕರ್ತವ್ಯವನ್ನು ನೆರವೇರಿಸಿರುವೆ. ಮಾನವೀಯತೆಗಿಂತ ಮಿಗಿಲಾದ ಮತ ಬೇರೊಂದಿಲ್ಲ ಎಂದು ತಿಳಿಸಿದರು.
ಕೆಲವು ಸ್ಥಾಪಿತ ಹಿತಾಸಕ್ತಿಗಳ ಸ್ವಾರ್ಥಪರ ಚಿಂತನೆಗಳಿಗೆ ಬಲಿಬಿದ್ದಿರುವ ಇಂದಿನ ಸಮಾಜ ವ್ಯವಸ್ಥೆಯ ಅಸ್ಥಿರತೆಗೆ ಇಂತಹ ಘಟನೆಗಳು ಎಂದಿಗೂ ದೊಡ್ಡ ಸಂದೇಶವನ್ನೇ ನೀಡುತ್ತದೆ. ಆದರೆ ಇದರ ಹಿಂದೆಯೂ ಕುಹಕಗಳನ್ನು ಹುಡುಕುವವರಿಗೆ ಏನೆಂದರೂ ಕೊರತೆಯಾಗದು. ಸಹೋದರತೆಯ, ಜೊತೆಯಾಗಿ ಸಮಾಜ ಮುನ್ನಡೆಸುವ ಸನ್ಮನಸ್ಸು ಇರಲೆಂಬುದಷ್ಟೇ ಸಹೃದಯರು ಮಾಡಬಹುದಾದ ಪ್ರಾರ್ಥನೆ.