ತಿರುವನಂತಪುರ: ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ನಡೆಯುತ್ತಿರುವ ಹೋರಾಟದ ಮರೆಯಲ್ಲಿ ಎಸ್‍ಡಿಪಿಐ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಸೋಮವಾರ ತಿಳಿಸಿದ್ದಾರೆ. ಎಸ್‍ಡಿಪಿಐ ಆಟಾಟೋಪ ನೋಡಿ ಸರ್ಕಾರ ಸುಮ್ಮನಿರದು ಎಂದೂ ಎಚ್ಚರಿಕೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ರಾಜ್ಯದಲ್ಲಿ ಹೋರಾಟ ಬಲಪಡೆದುಕೊಂಡಿದ್ದು, ಈ ಮಧ್ಯೆ ಕೆಲವು ಉಗ್ರವಾದಿ ಶಕ್ತಿಗಳು ಹೋರಾಟದ ದಿಕ್ಕು ಬದಲಾಯಿಸಲು ಯತ್ನಿಸುತ್ತಿದೆ. ಇಂತಹ ಸಂಘಟನೆಗಳು ಚಳವಳಿಯ ಹೆಸರಲ್ಲಿ ಕೋಮು ವಿದ್ವೇಷ ಹರಡಲು ಯತ್ನಿಸುತ್ತಿದ್ದು, ಸರ್ಕಾರ ಈ ಯತ್ನವನ್ನು ವಿಫಲಗೊಳಿಸಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ವಿಳಂಬವಾಗಿ ಜ್ಞಾನೋದಯವಾಗಿದೆ. ಎಸ್‍ಡಿಪಿಐ ನಂತಹ ಕೋಮು ಸಂಘಟನೆಗಳು ದೇಶವನ್ನು ದಳ್ಳುರಿಯತ್ತ ಸಾಗಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ವಿಧಾನ ಸಭೆಯಲ್ಲಿ ಎಸ್‍ಡಿಪಿಐ ವಿರುದ್ಧ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ತಿರುವನಂತಪುರದಲ್ಲಿ ಪ್ರತಿಕ್ರಿಯೆ ನೀಡಿದರು. ಸ್ವಂತ ಪಕ್ಷದಲ್ಲಿ ನುಸುಳಿಕೊಂಡಿರುವ ಎಸ್ ಡಿ ಪಿ ಐ ಸದಸ್ಯರನ್ನು ಹೊರಹಾಕಲು ಮುಖ್ಯಮಂತ್ರಿ ಮೊದಲು ಶ್ರಮಿಸಲಿ. ಕೇರಳದಲ್ಲಿ ಕೋಮುದ್ವೇಷ ಹರಡುವ ಹಾಗೂ ಮತೀಯ ಹಿಂಸಾಚಾರದಲ್ಲಿ ಇಂತಹ ಸಂಘಟನೆಗಳ ಪಾತ್ರ ಅಡಕವಾಗಿದೆ. ಇಂತಹ ಸಂಘಟನೆಗಳನ್ನು ಐಕ್ಯರಂಗ ಹಾಗೂ ಎಡರಂಗ ಪೋಷಿಸಿಕೊಂಡು ಬರುತ್ತಿರುವುದಾಗಿ ಸುರೇಂದ್ರನ್ ಆರೋಪಿಸಿದ್ದಾರೆ.