ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ಬಹಳ ಸಂಭ್ರಮ ಮತ್ತು ಭಕ್ತಿ ಶ್ರದ್ಧೆಯಿಂದ ಮಹಾಶಿವರಾತ್ರಿ ಪರ್ವ ಉತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮಗಳ ಅಂಗವಾಗಿ ಉಷ:ಪೂಜೆಯೊಂದಿಗೆ ಮೊಕ್ತೇಸರಾರಾದ ವೇ.ಮೂ.ಎನ್.ವಾಸುದೇವ ಭಟ್ ಅವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಪರಿವಾರ ದೇವರುಗಳಾದ ಶ್ರೀ ಮಹಾಗಣಪತಿ, ಶ್ರೀ ರಾಮವಿಠಲ, ಶ್ರೀ ನಾಗ ದೇವರಲ್ಲಿ, ಗುರು ವೃಂದಾವನ ಶ್ರೀ ವನಶಾಸ್ತಾರ ಸನ್ನಿಧಿಗಳಲ್ಲಿ ವಿಶೇಷ ಪೂಜಾಧಿಗಳನ್ನು ನಡೆಸಲಾಯಿತು.
ಶ್ರೀ ಕ್ಷೇತ್ರದ ಪ್ರಧಾನ ದೇವರಾದ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀಶ ವಿ. ಹಾಗೂ ಶಿವರಾಜ ಶಿಶಿಲ ಕಾರಂತ ಇನ್ನಿತರ ವಿಪೆÇ್ರೀತ್ತಮರೊಡನೆ ಸೇರಿ ಕ್ಷೀರಾಭಿಷೇಕ, ದಧಿಯಾಭಿಷೇಕ, ಘತಾಭಿಷೇಕ, ಮಧುವಾಭಿಷೇಕ, ಶರ್ಕರಾಭಿಷೇಕ, ಫಲಾಭಿಷೇಕ ಪಂಚಾಮೃತಾಭಿಷೇಕವನ್ನು ಮಾಡಿ ಶ್ರೀಗಂಧ ಪುಷ್ಪ ನಾಳಿಕೇರ ಜಲಧಾರೆಯೊಂದಿಗೆ ರುದ್ರಾಭಿಷೇಕದ ವಿಶೇಷ ಸೇವೆಯನ್ನು ಮಾಡಲಾಯಿತು.
ಸ್ವರ್ಣ ರಜತ ಪುಷ್ಪಾಲಂಕಾರದೊಂದಿಗೆ ಸರ್ವಾಭರಣ ಸರ್ವಾಲಂಕಾರ ಸೇವೆ ಅರ್ಚನೆ ದೀಪಾರಾಧನೆ ಕಾರ್ತಿಕ ಪೂಜೆಯೊಂದಿಗೆ ವಿಶೇಷ ಸೇವಾದಿಗಳನ್ನು ನೆರವೇರಿಸಲಾಯಿತು. ಸಾಮೂಹಿಕ ಪ್ರಾರ್ಥನೆಯನ್ನು ಶ್ರೀ ದೇವರಲ್ಲಿ ಸಲ್ಲಿಸಿ ಹಗಲು-ರಾತ್ರಿ ಭಜನಾ ಸೇವೆಯನ್ನು ಭಕ್ತ ಮಹಾಜನರಿಂದ ಶ್ರೀ ದೇವರಿಗೆ ಸಲ್ಲಿಸಿ ಶಿವ ಪೂಜಾ ಸೇವೆಗಳೊಂದಿಗೆ ಮಾಡಿ ಹಗಲು ರಾತ್ರಿ ಮಹಾ ಮಂಗಳಾರತಿಯನ್ನು ಜರಗಿಸಿ ಪ್ರಸನ್ನ ಕಾಲದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಶ್ರೀ ಗಂಧ ತೀರ್ಥ ಪ್ರಸಾದಗಳನ್ನು ಎಲ್ಲರೂ ಸ್ವೀಕರಿಸಿ ಧನ್ಯತೆಯನ್ನು ಪಡೆದರು. ಮುಖ್ಯ ಅತಿಥಿಗಳಾಗಿ ವೇ.ಮೂ.ಶ್ರೀಕಾಂತ ಮಾಣಿಲತ್ತಾಯರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನಿತ್ತರು.