ಕಾಸರಗೋಡು: ಕರೊನಾ ವೈರಸ್ ಅನ್ವಯ ಜಿಲ್ಲಾಸ್ಪತ್ರೆಯ ಐಸೊಲೇಶನ್ ವಾರ್ಡಿನಲ್ಲಿ ನಿಗಾದಲ್ಲಿರುವ ಕಾಞಂಗಾಡು ನಿವಾಸಿ ಸಹಿತ ಕೇರಳದಲ್ಲಿ ವೈರಸ್ ತಗುಲಿರುವ ಮೂರೂ ಮಂದಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾದಿಂದ ಇದುವರೆಗೆ ಕಾಸರಗೋಡಿಗೆ 86ಮಂದಿ ಆಗಮಿಸಿದ್ದು, ಇವರಲ್ಲಿ ಒಬ್ಬನಿಗೆ ವೈರಸ್ ಖಚಿತಪಡಿಸಲಾಗಿದ್ದು, ಇತರ 85ಮಂದಿಯನ್ನು ಅವರ ಮನೆಯಲ್ಲಿರಿಸಿ ನಿಗಾವಹಿಸಲಾಗುತ್ತಿದೆ. ಕನಿಷ್ಠ 28ದಿವಸಗಳ ಕಾಲ ಇವರು ಕಡ್ಡಾಯವಾಗಿ ಮನೆಯಲ್ಲಿ ಉಳಿದುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಚೀನಾದಿಂದ ಆಗಮಿಸಿರುವ ಹಿನ್ನೆಲೆಯಲ್ಲಿ ಮಾತ್ರ ಇವರ ಬಗ್ಗೆ ಹೆಚ್ಚಿನ ನಿಗಾವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ತಿಳಿಸಿದ್ದಾರೆ.
ಚೀನದಿಂದ ಆಗಮಿಸಿದವರು ವಿದೇಶಕ್ಕೆ ತೆರಳಿದರು!
ಕರೊನಾ ವೈರಸ್ ಕಾಣಿಸಿಕೊಂಡಿದ್ದ ಉಹಾನ್ ನಗರದಿಂದ ಕೋಯಿಕ್ಕೋಡಿನ ತಮ್ಮ ಊರಿಗೆ ಆಗಮಿಸಿದ್ದ ಇಬ್ಬರು ಆರೋಗ್ಯ ಇಲಾಖೆ ಸೂಚನೆ ಪಾಲಿಸದೆ ಇಲ್ಲಿಂದ ನೇರ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಮಾಹಿತಿ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯೂ ಖಚಿತಪಡಿಸಿದೆ. ವಿದೇಶಕ್ಕೆ ತೆರಳಿರುವ ಈ ಇಬ್ಬರನ್ನು ಪತ್ತೆಹಚ್ಚಿ ಅವರ ಬಗ್ಗೆ ತೀವ್ರ ನಿಗಾವಹಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಚೀನಾದ ಉಹಾನ್ ನಗರದಲ್ಲಿದ್ದ ಕೋಯಿಕ್ಕೋಡು ನಗರ ಆಸುಪಾಸಿನ 60ಮಂದಿ ವಾಪಸಾಗಿದ್ದು, ಇವರ ಬಗ್ಗೆ ನಿಗಾವಹಿಸುವ ಮಧ್ಯೆ ಈ ಇಬ್ಬರು ವಿದೇಶಕ್ಕೆ ಪರಾರಿಯಾಗಿದ್ದಾರೆ. ಉಳಿದ 58ಮಂದಿಯನ್ನು ಅವರ ಮನೆಗಳಲ್ಲಿರಿಸಿ ನಿಗಾವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 310ಮಂದಿ ಚೀನಾದಿಂದ ಆಮಿಸಿದವರಿದ್ದು, ಇವರಲ್ಲಿ ನಾಲ್ಕು ಮಂದಿಯನ್ನು ವೈದ್ಯಕೀಯ ಕಾಲೇಜು ಹಾಗೂ ಬೀಚ್‍ಆಸ್ಪತ್ರೆಯಲ್ಲಿರಿಸಿ ತಪಾಸಣೆಗೆ ಒಳಪಡಿಸಲಾಗಿದ್ದು, ಇವರಲ್ಲಿ ಯಾವುದೇ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಇವರನ್ನು ಮನೆಯಲ್ಲಿರಿಸಿ ನಿಗಾವಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಸಮಾಜದಲ್ಲಿ ತಾವು ಎಲ್ಲಿ ಒಂಟಿಯಾಗಬೇಕಾದೀತೆಂಬ ಭಯದಿಂದ ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಸುಮ್ಮನಿದ್ದು, ಇವರಲ್ಲಿ ಜಾಗೃತಿಮೂಡಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.