ಮಂಜೇಶ್ವರ: ಮಂಜೇಶ್ವರದ ಎಸ್ ಎ ಟಿ ಶಾಲೆಯ 2019-20ನೇ ಸಾಲಿನ ಕಲಿಕೋತ್ಸವವು ಮಂಗಳವಾರ ಜರುಗಿತು. ಶಾಲಾಮೈದಾನದಿಂದ ಹೊರಟ ಕಲಿಕೋತ್ಸವ ಮೆರವಣಿಗೆಯಲ್ಲಿ ವರ್ಣರಂಜಿತ ಘೋಷಣಾ ಫಲಕಗಳೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಿದರು.
ಉದ್ಘಾಟನಾ ಸಮಾರಂಭವು ದೀಪ ಪ್ರಜ್ವಾಲನೆಯೊಂದಿಗೆ ವಿಧ್ಯುಕ್ತವಾಗಿ ಚಾಲನೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯೆ ಸುಪ್ರಿಯಾ ಶೆಣೈಯವರು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯು ಅನಾವರಣಗೊಳ್ಳಲು ಮತ್ತು ಸಮಾಜಕ್ಕೂ ತಿಳಿಯಲು ಕಲಿಕೋತ್ಸವವು ಒಂದು ವೇದಿಕೆಯಾಗಲಿ ಎಂದು ಅಭಿಪ್ರಾಯ ಪಟ್ಟರು.
ಮಾತೃಸಂಘದ ಅಧ್ಯಕ್ಷೆ ಶಾರದಾ, ಉಪಾಧ್ಯಕ್ಷೆ ಜಯಶ್ರೀ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್ ಆರ್ ಜಿ ಸಂಚಾಲಕ ಗಣೇಶ್ ಪ್ರಸಾದ್ ಸ್ವಾಗತಿಸಿ,ಪ್ರೌಢ ಶಾಲಾ ಎಸ್ ಆರ್ ಜಿ ನಾರಾಯಣ ಹೆಗ್ಡೆ ವಂದಿಸಿದರು. ವೀರೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ಮುರಳಿ ಕೃಷ್ಣ ಅಧ್ಯಕ್ಷತೆ ವಹಿಸಿದರು. ಶೈಕ್ಷಣಿಕ ವರ್ಷದಲ್ಲಿ ನಡೆದ ಕಾರ್ಯಕ್ರಮಗಳ ಸಚಿತ್ರ ವರದಿಯನ್ನು ಪ್ರಾಜೆಕ್ಟರ್ ಬಳಸಿ ರಕ್ಷಕರಿಗೆ ತೋರಿಸಲಾಯಿತು. ಹತ್ತನೇ ತರಗತಿ ವಿದ್ಯಾರ್ಥಿಗಳ ವತಿಯಿಂದ ಮಕ್ಕಳಿಗೆ ಮತ್ತು ಹೆತ್ತವರಿಗೆ ಸಿಹಿತಿಂಡಿ ಹಂಚಲಾಯಿತು. ಐದರಿಂದ ಒಂಭತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳಿಂದ ವಿವಿಧ ಕಲಿಕಾ ಚಟುವಟಿಕೆಗಳು ಜರಗಿದವು. ಪ್ರಹಸನ, ಸಂಭಾಷಣೆ, ಗುಂಪು ಸಂಗೀತ,ನೃತ್ಯ, ರಸ ಪ್ರಶ್ನೆ, ವಿಜ್ಞಾನ ಪ್ರಯೋಗಗಳು, ಮಾಹಿತಿ ತಂತ್ರಜ್ಞಾನ ಉಪಯೋಗಿಸಿ ನಡೆಸಿದ ಗಣಿತ ಮತ್ತು ಇಂಗ್ಲಿಷ್ ಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳನ್ನು ಮಕ್ಕಳೇ ಸಂಯೋಜಿಸಿ ನಡೆಸಿದ್ದು ವಿಶೇಷವಾಗಿತ್ತು. ಶಾಲೆಯ ಕಲಾ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ಬೇಳ ಸಂಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳ ಚಿತ್ರ ಕಲಾ ಪ್ರದರ್ಶನ ಸೇರಿದವರ ಗಮನ ಸೆಳೆಯಿತು. ಹಲವಾರು ರಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಧ್ಯಾಹ್ನದೂಟದ ಆತಿಥ್ಯವನ್ನೂ ಸ್ವೀಕರಿಸಿದರು. ಕಾರ್ಯಕ್ರಮಗಳು ಸಂಜೆಯವರೆಗೂ ನಡೆದವು. ಹಿರಿಯ ಪ್ರಾಥಮಿಕ ವಿಭಾಗದ ಮತ್ತು ಹೈಸ್ಕೂಲ್ ವಿಭಾಗದ ಅಧ್ಯಾಪಕರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.