ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಚುರುಕುಗೊಂಡಿದೆ. ರಾಮ ಮಂದಿರ ಟ್ರಸ್ಟ್ ಅಧ್ಯಕ್ಷರಾಗಿ ಮಹಾಂತ್ ಗೋಪಾಲ್ ದಾಸ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಂಪತ್ ರೈರನ್ನು ಆಯ್ಕೆ ಮಾಡಲಾಗಿದೆ.
ನವದಹೆಲಿಯಲ್ಲಿ ಹಿರಿಯ ವಕೀಲ ಕೆ. ಪರಸಾನ್ ನಿವಾಸದಲ್ಲಿ ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಶ್ರೀರಾಮ ಮಂದಿರ ಟ್ರಸ್ಟ್ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಯಿತು. ಇದರ ಜೊತೆಗೆ ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರಟರಿ ಆಗಿದ್ದ ನೃಪೇಂದ್ರ ಮಿಶ್ರಾರನ್ನು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಮುಖ್ಯಸ್ಥರಾಗಿ ನೇಮಿಸಲಾಯಿತು.
ರಾಮ ಮಂದಿರ ನಿರ್ಮಾಣ ಕಾರ್ಯವನ್ನು ವೇಗದ ಗತಿಯಲ್ಲಿ ನಡೆಸುವ ಉದ್ದೇಶದಿಂದ ಸಮಿತಿಯನ್ನು ರಚಿಸಲಾಗಿದ್ದು, ಈ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್?ನಲ್ಲಿ ಏಳು ಸದಸ್ಯರು, ಐವರು ನಾಮನಿರ್ದೇಶನ ಸದಸ್ಯರು ಹಾಗೂ ಮೂವರು ಟ್ರಸ್ಟಿಗಳು ಇರಲಿದ್ದಾರೆ.
ಫೆಬ್ರವರಿ.05ರಂದು ಸಮಿತಿ ರಚನೆ ಬಗ್ಗೆ ಪ್ರಧಾನಿ ಮಾತು: ಕಳೆದ ಫೆಬ್ರವರಿ.05ರಂದು ಸಂಸತ್ ನಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದರು. ಅಂದು ರಾಮ ಮಂದಿರ ನಿರ್ಮಾಣಕ್ಕಾಗಿ 15 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಈ ಸಮಿತಿಗೆ ರಾಮ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ವಹಿಸಲಾಗುತ್ತದೆ ಎಂದು ಹೇಳಿದ್ದರು. ಇನ್ನು, ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಗ್ಯಾನೇಶ್ ಕುಮಾರ್ ಮತ್ತು ಉತ್ತರ ಪ್ರದೇಶ ಸರ್ಕಾರದ ಪ್ರತಿನಿಧಿಯಾಗಿ ಅವಿನಾಶ್ ಅವಾಸ್ತಿ ಹಾಗೂ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ ಹಾಜರಿದ್ದರು.