ಕುಂಬಳೆ: ಯಕ್ಷಧ್ರುವ ಪಟ್ಲ ಪೌಂಡೇಶನ್ ನ ಕುಂಬಳೆ ಘಟಕದ ವಿಶೇಷ ಸಭೆ ಗುರುವಾರ ಸಂಜೆ ಕಂಚಿಕಟ್ಟೆಯಲ್ಲಿ ನಡೆಯಿತು. ಸಭೆಯಲ್ಲಿ ಕುಂಬಳೆ ಘಟಕದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿ ಘಟಕದ ಕಳೆದ ನಾಲ್ಕು ವರ್ಷಗಳ ಚಟುವಟಿಕೆಗಳ ಸಮಗ್ರ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರು ಮಾತನಾಡಿ, ಟ್ರಸ್ಟ್ ಕಳೆದ ಐದು ವರ್ಷಗಳಿಂದ ಕಲಾವಿದರ, ಕಲಾಭಿಮಾನಿಗಳ ಸಂಪೂರ್ಣ ಸಹಕಾರದೊಂದಿಗೆ ಬೆಳೆದುಬಂದಿದೆ. ಸಂಕಷ್ಟದಲ್ಲಿರುವ ಕಲಾವಿದರ ಆಶೋತ್ತರಗಳಿಗೆ ಆಸರೆಯಾಗಿ ಟ್ರಸ್ಟ್ ವೈದ್ಯಕೀಯ ನೆರವು, ಜೀವವಿಮೆ ಸಹಿತ ವಿವಿಧ ನೆರವನ್ನು ಈಗಾಗಲೇ ನೀಡುವಲ್ಲಿ ಸಾಫಲ್ಯತೆ ಕಂಡಿದೆ ಎಂದು ತಿಳಿಸಿದರು. ಕಳೆದ 2019ರಲ್ಲಿ 17.5 ಲಕ್ಷ ರೂ.ಗಳ ವಿಮಾ ನೆರವನ್ನು ವಿತರಿಸಲಾಗಿದೆ ಎಂದ ಅವರು, ಕಡು ಬಡತನದಲ್ಲಿ ಕಂಗೆಟ್ಟಿದ್ದ ಮೂರು ಮಂದಿ ಕಲಾವಿದರಿಗೆ ಈಗಾಗಲೇ ಮನೆಗಳನ್ನೂ ನೀಡಲಾಗಿದೆ ಎಂದರು. ಕಿನ್ನಿಗೋಳಿ ಸನಿಹ 11 ಎಕ್ರೆ ನಿವೇಶನದಲ್ಲಿ ಕಲಾವಿದರಿಗೆ ನೂರು ಮನೆಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಯೋಜನೆ ಪ್ರಗತಿಯಲ್ಲಿದೆ. ಟ್ರಸ್ಟ್ ಈಗಾಗಲೇ 5.5 ಕೋಟಿ ರೂ.ಗಳ ವಿವಿಧ ನೆರವನ್ನು ನೀಡಿರುವುದು ಕಲಾಪ್ರೇಮಿ ಸಹೃದಯರ ಸಕಾರಾತ್ಮಕ ಪ್ರೇರಣೆಯಿಂದ ಎಂದು ಪಟ್ಲರು ತಿಳಿಸಿದರು.
ಪ್ರಸ್ತುತ ವರ್ಷ ಮೇ.30 ರಂದು ಮಂಗಳೂರಲ್ಲಿ ಹಮ್ಮಿಕೊಳ್ಳಲಾಗುವ ಪಟ್ಲ ಸಂಭ್ರಮದಲ್ಲಿ ವಿಶೇಷವೆಂಬಂತೆ ಮೊದಲ ಬಾರಿಗೆ ಹವ್ಯಾಸಿ ಯಕ್ಷಗಾನ ತಂಡಗಳಿಗೆ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಮುಂದಿನ ತಿಂಗಳು ಪೂರ್ವಭಾವೀ ಚಟುವಟಿಕೆಗಳು ನಡೆಯಲಿದ್ದು, ತೆಂಕು-ಬಡಗು ತಿಟ್ಟುಗಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಪಟ್ಲ ಸಂಭ್ರಮದ ಅಂಗವಾಗಿ ಕುಂಬಳೆ ಘಟಕದಿಂದ 50 ಸಾವಿರ ರೂ.ಗಳ ನಿಧಿಯನ್ನು ಈ ಸಂದರ್ಭ ಕುಂಬಳೆ ಘಟಕಾಧ್ಯಕ್ಷ ಜಗನ್ನಾಥ ಶೆಟ್ಟಿ ಎಸ್. ಅವರು ಪಟ್ಲ ಸತೀಶ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ಕುಂಬಳೆ ಘಟಕದ ಗೌರವ ಮಾರ್ಗದರ್ಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ಗುರು ದಿವಾಣ ಶಿವಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪೃಥ್ವಿ ಶೆಟ್ಟಿ ಕಂಚಿಕಟ್ಟೆ ವಂದಿಸಿದರು.
ಕಾರ್ಯಕ್ರಮದಲ್ಲಿ ಕುಂಬಳೆ ಘಟಕದ ಸಮಿತಿಗೆ ಹೊಸ ಸದಸ್ಯರನ್ನು ನೇಮಕಗೊಳಿಸಲಾಯಿತು. ಉಪಾಧ್ಯಕ್ಷರುಗಳಾಗಿ ಮುರಳೀಧರ ಯಾದವ್ ನಾಯ್ಕಾಪು, ಸುಜಿತ್ ರೈ, ನಿರಂಜನ ರೈ ಪೆರಡಾಲ, ವೆಂಕಟೇಶ ಹೆಬ್ಬಾರ್, ಸಂಚಾಲಕರಾಗಿ ಸುಜನ ಶಾಂತಿಪಳ್ಳ,ಎ.ಆರ್.ಸುಬ್ಬಯ್ಯಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ ಪ್ರಸಾದ್ ಶೆಟ್ಟಿ ಬಂಬ್ರಾಣ ಬೈಲು, ರಾಮಕೃಷ್ಣ, ಶರಣ್, ರಾಮಚಂದ್ರ ಬಲ್ಲಾಳ್ ನಾಟೆಕಲ್ಲು, ಸೂರಜ್ ಭಂಡಾರಿ ಅವರನ್ನು ಸೇರ್ಪಡೆಗೊಳಿಸಲಾಯಿತು. ಅವಿನಾಶ ಕಾರಂತ ಎಂ, ಕುಂಬಳೆ ಘಟಕದ ಖಜಾಂಜಿ ರಾಧಾಕೃಷ್ಣ ನಾವಡ ಮಧೂರು, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ರಾಘವೇಂದ್ರ ಪ್ರಸಾದ್ ಬದಿಯಡ್ಕ, ಲೋಕನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಾಧ್ಯಮ ಸಂವಾದ:
ಸಭೆಯ ಬಳಿಕ ಆಯೋಜಿಸಲಾದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ ಅವರು, ಯಕ್ಷಗಾನ ಕಲಾವಿದರ ಸಮಗ್ರ ಬೆಳವಣಿಗೆಗಳಿಗೆ ಪೂರಕವಾಗಿ ಟ್ರಸ್ಟ್ ಕಾರ್ಯಾಚರಿಸುತ್ತಿದೆ. ಟ್ರಸ್ಟ್ ಕಲಾವಿದರ, ಕಲಾಪೋಷಕರ ನೆರವು-ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು-ಸಹಕಾರಗಳನ್ನಷ್ಟೇ ನೀಡುತ್ತಿದೆ ಎಂದರು. ಕುಂಬಳೆಯ ಸಾಂಸ್ಕøತಿಕ ಶ್ರೀಮಂತಿಕೆಯ ಪ್ರಾಧಿನಿಧಿಕ ಸ್ವರೂಪವಾದ ಪಾರ್ತಿಸುಬ್ಬನ ಹೆಸರನ್ನು ನಿತ್ಯ-ನಿರಂತರವಾಗಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕುಂಬಳೆ ಘಟಕವು ಮಾಡುವ ಎಲ್ಲಾ ಚಟುವಟಿಕೆಗಳಿಗೂ ಟ್ರಸ್ಟ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದರು.