ಪೆರ್ಲ:ಹಾಲು ಅಭಿವೃದ್ಧಿ ಇಲಾಖೆಯ ರಾಜ್ಯ ಕ್ಷೀರ ಸಹಕಾರಿ ಪ್ರಶಸ್ತಿಗೆ ಎಣ್ಮಕಜೆ ಗ್ರಾ. ಪಂ.ಉಪಾಧ್ಯಕ್ಷ ಪೆರ್ಲ ಹಾಲು ಉತ್ಪಾದಕರ ಸಹಕಾರಿ ಸಂಘದ ಹೈನುಗಾರ ಕೃಷಿಕ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಆಯ್ಕೆಯಾಗಿದ್ದಾರೆ.
ಕೇರಳ ಸರ್ಕಾರದ ಅರಣ್ಯ, ಮೃಗ ಸಂರಕ್ಷಣೆ ಹಾಗೂ ಹಾಲು ಉತ್ಪನ್ನ ಅಭಿವೃದ್ಧಿ ಸಚಿವ ನ್ಯಾಯವಾದಿ ಕೆ.ರಾಜು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ಪ್ರಶಸ್ತಿ 1ಲಕ್ಷ ನಗದು ಒಳಗೊಂಡಿದೆ.
ಪೆರ್ಲ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರೂ ಆಗಿರುವ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ 2019-20ರಲ್ಲಿ 2,92,629 ಲೀಟರ್ ಹಾಲು ಉತ್ಪಾದನೆಗೆ ಪ್ರಶಸ್ತಿ ಲಭಿಸಿದೆ. ತಿರುವನಂತಪುರಂ ಕನಕಕುನ್ನಿಲ್ ನಲ್ಲಿ ಫೆ.26ರಿಂದ 28ರ ವರೆಗೆ ರಾಜ್ಯ ಕ್ಷೀರ ಸಂಗಮಂ ಕಾರ್ಯಕ್ರಮ ನಡೆಯಲಿದೆ.ಡೈರಿ ಎಕ್ಸ್ಪೋ ಸಚಿವ ಇ.ಪಿ.ಜಯರಾಜನ್ ಉದ್ಘಾಟಿಸುವರು.ಕೆ.ರಾಜು ಅಧ್ಯಕ್ಷತೆ ವಹಿಸುವರು. 26ರಂದು ನಿಶಾಗಂಧಿಯಲ್ಲಿ ಕ್ಷೀರ ಸಹಕಾರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. 28ರಂದು ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಸಹಕಾರಿ ಸಚಿವ ಕಡಕಂಪಳ್ಳಿ ಸುರೇಂದ್ರನ್, ಹಾಲು ಅಭಿವೃದ್ಧಿ ಇಲಾಖೆ, ರಾಜ್ಯ ಹಾಲು ಉತ್ಪಾದಕರ ಸಂಘಟನೆ ಪದಾಧಿಕಾರಿಗಳು ರಾಜ್ಯ ಕ್ಷೀರ ಸಂಗಮಂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.