ಕಾಸರಗೋಡು: ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಸೇರ್ಪಡೆಗೆ ಅರ್ಹರೆಂದು ಖಾತ್ರಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸವಲತ್ತು 6ಸಾವಿರ ರೂ. ಪಡೆದ 133727ಮಂದಿಗೆ ಕಿಸಾನ್ ಕಾರ್ಡು ವಿತರಿಸಿ, ಅವರಿಗೆ ಕೃಷಿಸಾಲ ನೀಡುವ ಬಗ್ಗೆ ಅಭಿಯಾನ ನಡೆಯಲಿದೆ. ಫೆಬ್ರವರಿ 17ರಿಂದ 24ರ ವರೆಗೆ ಅಭಿಯಾನ ನಡೆಯಲಿದೆ.
ಯೋಜನೆ ಅಂಗವಾಗಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ವಯ ಆರು ಸಾವಿರ ರೂ. ಮೊತ್ತ ಪಡೆದುಕೊಂಡಿರುವ ಎಲ್ಲ ಕೃಷಿಕರು ಸಂಬಂಧಪಟ್ಟ ಕೃಷಿಭವನಕ್ಕೆ ತೆರಳಿ ತಾವು ನಡೆಸುವ ಕೃಷಿ, ಕೃಷಿ ಸ್ಥಳದ ವಿಸ್ತೀರ್ಣದ ದಾಖಲೆ ಮುಂತಾದ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ತಿಳಿಸಿದ್ದಾರೆ. ಈ ಕೃಷಿಕರಿಗೆ ಅವರು ನಡೆಸಲುದ್ದೇಶಿಸಿರುವ ಕೃಷಿಯ ಬಗ್ಗೆ ಮಾಹಿತಿ ಒದಗಿಸುವುದರ ಜತೆಗೆ ಕಿಸಾನ್ ಕ್ರೆಡಿಟ್ ಕಾರ್ಡುಗಳಿಗಾಗಿ ಸಂಬಂಧಪಟ್ಟ ಬ್ಯಾಂಕುಗಳಿಗೆ ಕೃಷಿಕರನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು. ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅರ್ಹ ಕೃಷಿಕರು ಈ ಯೋಜನೆಯನ್ನು ಸವೀಕರಿಸುವ ಬ್ಯಾಂಕ್ ಶಾಖೆಗಳನ್ನು ಮಾತ್ರ ಸಂಪರ್ಕಿಸಬೇಕಾಗಿದೆ. ಬ್ಯಾಂಕುಗಳು ಕಾಲವಿಳಂಬವಿಲ್ಲದೆ ಈ ಕೃಷಿಕರಿಗೆ ಸಾಲ ವ್ಯವಸ್ಥೆ ಒದಗಿಸಿಕೊಡುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಯೋಜನೆಯ ಫಲಾನುಭವಿಗಳೆಲ್ಲರೂ ಫೆ, 17ರಿಂದ 24ರ ವರೆಗೆ ನಡೆಯುವ ಅಭಿಯಾನದಲ್ಲಿ ಆಯಾ ಕೃಷಿಭವನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಕೃಷಿ ಅನುಬಂಧಿತ ವಲಯಗಳಾದ ಮೀನು ಸಾಕಣೆ, ಮೃಗಸಂರಕ್ಷಣೆ, ದನ ಸಾಕಣೆ ಕೃಷಿಕರೂ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ. ಜಿಲ್ಲೆಯ ವಿವಿಧ ಬ್ಯಾಂಕುಗಳಿಂದ ಶೇ. 4ರ ಬಡ್ಡಿದರದಲ್ಲಿ ಚಿನ್ನಾಭರಣ ಅಡವಿರಿಸ ಸಾಲ ಪಡೆದ ಕೃಷಿಕರೂ ಕಿಸಾನ್ ಕ್ರೆಡಿಟ್ ಕಾರ್ಡು ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ. ಕೃಷಿ ಸಾಲ ಪಡೆದವರು ಈ ಸವಲತ್ತಿನ ಪ್ರಯೋಜನಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.