ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಕರ್ನಾಟಕ ಸಂಗೀತದ ಪಿತಾಮಹನೆನ್ನಿಸಿದ ಸಂತ ತ್ಯಾಗರಾಜರ ಸ್ಮರಣಾರ್ಥ `ತ್ಯಾಗರಾಜ ಆರಾಧನೆಯ'ಯನ್ನು ಅವರ ಪ್ರಸಿದ್ಧ ಪಂಚರತ್ನ ಕೃತಿ ರತ್ನಗಳನ್ನು ಆಲಾಪಿಸುವುದರೊಂದಿಗೆ ಆಚರಿಸಲಾಯಿತು.
18 ನೇ ಶತಮಾನದ ಸಂತ ತ್ಯಾಗರಾಜರು ಧನ, ಕನಕ ಸಂಪತ್ತನ್ನು ತ್ಯಜಿಸಿ ಶ್ರೀರಾಮ ಧ್ಯಾನದಿಂದ ಮುಕ್ತಿ ಮಾರ್ಗವನ್ನು ಕಂಡುಕೊಂಡವರು. ಭಿಕ್ಷಾಟನೆ ಮಾಡುತ್ತಾ ರಾಮ ಭಕ್ತಿಯನ್ನು ಮೆರೆಯುವುದರೊಂದಿಗೆ ಸಾವಿರಾರು ಕೀರ್ತನೆಗಳನ್ನು ತೆಲುಗಿನಲ್ಲಿ ರಚಿಸಿ ಕರ್ನಾಟಕ ಸಂಗೀತಕ್ಕೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಅವರ ಆರಾಧನೆಯನ್ನು ನಡೆಸುವ ಮೂಲಕ ತ್ಯಾಗರಾಜರಿಗೆ, ಅವರ ಸಂಗೀತಕ್ಕೆ ನಾವು ಗೌರವ ಸಲ್ಲಿಸಬಹುದು ಎಂದು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಪೂಜ್ಯ ಸ್ವಾಮಿ ವಿವಿಕ್ತಾನಂದ ಸರಸ್ವತಿಜೀಯವರು ಈ ಸಂದರ್ಭದಲ್ಲಿ ಹೇಳಿದರು.
ಚಿನ್ಮಯ ವಿದ್ಯಾಲಯದ ಸಂಗೀತ ಅಧ್ಯಾಪಿಕೆ, ಪ್ರಸಿದ್ಧ ಸಂಗೀತ ವಿದುಷಿ ದಿವ್ಯಾ ಮಹೇಶ್ ಹಂಸ ದ್ವನಿ, ಆದಿ ತಾಳದಲ್ಲಿ ಗಣೇಶ ಸ್ತುತಿಯ ಮೂಲಕ ತ್ಯಾಗರಾಜರ ಪಂಚರತ್ನ ಕೃತಿಗಳನ್ನು ಹಾಡತೊಡಗಿದರು. ಬಳಿಕ ಜಗದಾನಂದ ಕಾರಕ, ದುಡುಕೂಗಲ ನನ್ನೇದೋರ(ಗೌಳ, ಆದಿತಾಳ), ಸಾದಿಂಚನೇ ಓಮನಸಾ(ರಾಗ ಆರಭಿ, ಆದಿ ತಾಳ), ಎಂದರೋ ಮಹಾನುಭಾವಲೋ(ರಾಗ ಶ್ರೀ, ಆದಿತಾಳ), ಸೀತಾ ಕಲ್ಯಾಣ ವೈಭೋಗಮೇ ರಾಮಾ ಕಲ್ಯಾಣ ವೈಭೋಗದೊಂದಿಗೆ ಮುಕ್ತಾಯಗೊಂಡಿತು. ಕು|ದಿಶ ಸಂಗೀತದಲ್ಲೂ, ದಿವ್ಯಾ ಮಹೇಶ್‍ರೊಂದಿಗೆ ಶ್ರೀಧರ ರೈ ಮೃದಂಗದಲ್ಲೂ, ನಟರಾಜ ಕಲ್ಲೂರಾಯ ಪಿಟೀಲಿನಲ್ಲೂ ಸಾಥ್ ನೀಡಿದರು.
ಬ್ರಹ್ಮಚಾರಿ ಅಖಿಲೇಶ್ ಚೈತನ್ಯ, ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್, ಉಪಪ್ರಾಂಶುಪಾಲೆ ಸಂಗೀತ ಪ್ರಭಾಕರನ್, ಮುಖ್ಯೋಪಾಧ್ಯಾಯಿನಿಯರಾದ ಸಿಂಧು ಶಶೀಂದ್ರನ್, ಪೂರ್ಣಿಮ, ಅನೇಕ ಸಂಗೀತಾರಾಧಕರು ಉಪಸ್ಥಿತರಿದ್ದರು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕು.ಕೃಷ್ಣನಂದ ಕಾರ್ಯಕ್ರಮ ನಿರೂಪಿಸಿದರು.