ಮುಳ್ಳೇರಿಯ: ಅನೇಕ ಗಿಡಗಳ ಸಂತತಿಯು ನಾಶದ ಅಂಚಿಗೆ ತಲುಪಿದ್ದು, ಇವುಗಳ ರಕ್ಷಣೆಗೆ ಕಸಿ ಪದ್ಧತಿಯು ಅಗತ್ಯ. ಕಸಿ ಕಟ್ಟುವ ಬಗ್ಗೆ ಹಾಗೂ ಅಮೂಲ್ಯ ಸಸ್ಯತಳಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಪ್ರತಿಯೊಬ್ಬ ಕೃಷಿಕರೂ ಕೂಡಾ ಕಸಿ ಕಟ್ಟುವ ವಿಧಾನವನ್ನು ಅರಿತಿರಬೇಕು ಎಂದು ಮುಳ್ಳೇರಿಯ ಆಲಂತಡ್ಕದ ಖುಷಿ ಫಾಮ್ರ್ಸ್ ಮಾಲಕ ಆಲಂತಡ್ಕ ಲಕ್ಷ್ಮೀಶ ಕೇಕುಣ್ಣಾಯ ಅವರು ಹೇಳಿದರು.
ಅವರು ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ನಡೆದ ಗಿಡಗಳಿಗೆ ಕಸಿ ಕಟ್ಟುವ ವಿಧಾನದ ಕುರಿತಾದ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.
ಕಸಿ ಕಟ್ಟುವ ವಿಚಾರದಲ್ಲಿ ಕ್ರಾಫ್ಟಿಂಗ್ ಹಾಗೂ ಬಡ್ಡಿಂಗ್ ಎಂಬ ವಿಧಾನಗಳಿದ್ದು, ಹಲಸಿನ ಮರಗಳಿಗೆ ಬಡ್ಡಿಂಗ್ ಮೂಲಕ ಕಸಿ ಕಟ್ಟಲಾಗುತ್ತದೆ. ಕಸಿ ಪದ್ಧತಿಯಲ್ಲಿ ಒಂದೇ ಮರದಲ್ಲಿ ಅನೇಕ ತಳಿಯ ಫಲಗಳನ್ನು ಉತ್ಪಾದಿಸುವ ಅವಕಾಶವಿದೆ. ಕಸಿ ಮಾಡಿದ ಗಿಡಗಳನ್ನು ಸುಮಾರು 8 ದಿನಗಳ ಕಾಲ ಸೆಖೆ ಇರುವ ಕಡೆ ಇರಿಸಬೇಕು. ಕುದನೆಯ ಗಿಡದಲ್ಲಿ ಬದನೆ ಹಾಗೂ ಮೆಣಸಿನ ಗಿಡಗಳ ಕಸಿ ಪ್ರಯೋಗ ನಡೆಸಲಾಗುವುದು. ಕಸಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಅನೇಕ ಅಪರೂಪದ ತಳಿಗಳ ಸಂರಕ್ಷಣೆ ಸಾಧ್ಯ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ವೆಂಕಟಕೃಷ್ಣ ಕಾರಂತ ವಹಿಸಿದ್ದರು. ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮ ಭಾರಿತ್ತಾಯ, ವಲಯ ಸಮಿತಿ ಉಪಾಧ್ಯಕ್ಷ ರವಿರಾಜ ಕೇಕುಣ್ಣಾಯ, ವಲಯ ಕೋಶಾ„ಕಾರಿ ಶ್ರೀಪ್ರಸಾದ ಎ, ಸದಸ್ಯರಾದ ಸುಮತಿ ಬಿ, ಲತಾ ಕೆ.ಆರ್, ಆಶಾ ಎ, ಪರಮೇಶ್ವರ ಕೇಕುಣ್ಣಾಯ, ಗುರುರಾಜ್ ಕೇಕುಣ್ಣಾಯ, ಸತ್ಯನಾರಾಯಣ ಕೆ.ಎ, ಸಾತ್ವಿಕ್ ಕೇಕುಣ್ಣಾಯ, ಖುಷಿ, ಸಾಕ್ಷಿ ಇದ್ದರು. ವಲಯ ಕಾರ್ಯದರ್ಶಿ ಪ್ರಶಾಂತ ರಾಜ ವಿ. ತಂತ್ರಿ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಮುದಾಯದ ಸದಸ್ಯರಿಗೆ ಉಚಿತವಾಗಿ ವಿವಿಧ ಗಿಡಗಳ ವಿತರಣೆ ನಡೆಯಿತು.