ಕಾಸರಗೋಡು: ಜಿಲ್ಲೆಯ ಬಹುಭಾಷಾ ಸಂಸ್ಕøತಿಯನ್ನು ನೆರೆಯ ದ.ಕ ಜಿಲ್ಲೆಯ ಜನತೆಗೆ ತಿಳಿಯಪಡಿಸುವಲ್ಲಿ ಮಂಗಳೂರಿನಲ್ಲಿ ಗಡಿನಾಡ ಉತ್ಸವ ಆಚರಿಸಲು ಜಿಲ್ಲಾಡಳಿತ ಬದ್ಧವಾಗಿರುವುದಾಗಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‍ಬಾಬು ತಿಳಿಸಿದರು.
ಅವರು ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ವಾರ್ತಾಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಹಾಗೂ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಯೋಗದೊಂದಿಗೆ ಬುಧವಾರ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ನಡೆದ ಗಡಿನಾಡ ಉತ್ಸವ ಉದ್ಘಾಟಿಸಿ ಮಾತನಾಡಿದರು. ಕಾಸರಗೋಡಿನ ಸಂಸ್ಕøತಿಯನ್ನು ನೆರೆಯ ಜಿಲ್ಲೆಯ ಜನತೆಗೆ ತಿಳಿಯಪಡಿಸುವುದರ ಜತೆಗೆ, ಅಲ್ಲಿನ ಸಂಸ್ಕøತಿಯನ್ನು ತಿಳಿದುಕೊಳ್ಳುವ ಮೂಲಕ ಪರಸ್ಪರ ಬಾಂಧವ್ಯ ಬೆಸೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ಕಾಲೇಜು ಪ್ರಭಾರ ಪ್ರಾಂಶುಪಾಲ ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಧ್ಯಾಪಕಿ, ಖ್ಯಾತ ಹಾಸ್ಯ ಲೇಖಕಿ ಪ್ರೊ. ಭುವನೇಶ್ವರಿ ಹೆಗಡೆ ಆಶಯ ಭಾಷಣ ಮಾಡಿ, ಕಾಸರಗೋಡಿನ ಮಣ್ಣಿನ ಪ್ರತಿಕಣದಲ್ಲೂ ಸಾಂಸ್ಕøತಿಕ ಹಿರಿಮೆಯಿದೆ. ಇಲ್ಲಿ ಬರಡು ಭೂಮಿ ಎಂಬುದೇ ಇಲ್ಲ. ಮಂಜೇಶ್ವರ ಗೊವಿಂದ ಪೈ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ, ಡಾ. ವೆಂಕಟ್ರಾಜ ಪುಣಿಂಚಿತ್ತಾಯ ಮುಂತಾದ ಮಹಾನುಭಾವರನ್ನು ನಾಡಿಗೆ ಸಮರ್ಪಿಸಿದ ಈ ಪ್ರದೇಶದಲ್ಲಿ ನಡೆಯುತ್ತಿರುವ ಕನ್ನಡ ಚಟುವಟಿಕೆಯೂ ಮಹತ್ತರವಾದುದು. ಇಂತಹ ಮಹಾತ್ಮರು ನಾಡಿಗೆ ನೀಡಿರುವ ಉದಾತ್ತ ಕೊಡುಗೆಯನ್ನು ಕಾಪಾಡಿಕೊಂಡುಬರುವ ಅನಿವಾರ್ಯತೆ ಇಂದಿನ ತಲೆಮಾರಿಗಿದೆ. ಕಾಸರಗೋಡಿನಲ್ಲಿ ಯಕ್ಷಗಾನದ ಮೂಲಕವೂ ಕನ್ನಡ ಬೆಳೆಸುವ ಕಾರ್ಯ ನಡೆಯುತ್ತಿದೆ.
ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಆಡಳಿತದ ಪ್ರೋತ್ಸಾಹವಿಲ್ಲದಿದ್ದರೂ, ಕನ್ನಡತನವನ್ನು ಪೋಷಿಸಿ, ಬೆಳೆಸುತ್ತಿರುವ ಇಲ್ಲಿನ ಕನ್ನಡಿಗರ ಶ್ರಮ ಶ್ಲಾಘನೀಯ. ಇನ್ನೊಂದೆಡೆ ಅಂಗ್ಲಭಾಷೆ ಪ್ರಭಾವ ಮಾತೃಭಾಷೆಯನ್ನು ಅವನತಿಯತ್ತ ಸಾಗಿಸುತ್ತಿದೆ ಎಂದು ತಿಳಿಸಿದರು.
ಶ್ವಾನಕ್ಕೂ ಇಂಗ್ಲಿಷ್ ಕಲಿಕೆ:
ಇಂದು ಆಂಗ್ಲಭಾಷೆ ವ್ಯಾಮೋಹ ವ್ಯಾಪಕಗೊಳ್ಳುತ್ತಿದೆ. ಮನೆಯ ಸಾಕುನಾಯಿಗಳಲ್ಲೂ ಆಂಗ್ಲಭಾಷೆಯಲ್ಲಿ ಸಂಭಾಷಣೆ ನಡೆಸಲಾಗುತ್ತಿದೆ. ಮಾತೃಭಾಷೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ತಿಳಿಸಿದರು. ಇಂದು ಹಾಸ್ಯ ಕವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಹಾಸ್ಯ ಸಾಹಿತ್ಯ ರಚಿಸುವ ಮೂಲಕ ಈ ವಲಯದಲ್ಲಿ ಮತ್ತಷ್ಟು ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯ. ಹಾಸ್ಯ ನಗುವಿಗೆ ಟನಿಕ್ ಇದ್ದಂತೆ. ನಗುವಿನಿಂದ ಬಹಳಷ್ಟು ನೋವು ಮರೆಯಲು ಸಾಧ್ಯ. ಇದಕ್ಕಾಗಿ 'ನಗು ನಗುತ್ತಾ ಇರೋಣ, ಚಿಂತೆ ಮರೆಯೋಣ' ಎಂದು ತಮ್ಮ ಹಾಸ್ಯ ಶೈಲಿಯಲ್ಲಿ ಸಭಿಕರಿಗೆ ಕಿವಿಮಾತು ಹೇಳಿದರು.
ಕಾಸರಗೋಡು ಜಿಲ್ಲಾ ವಾರ್ತಾಧಿಕಾರಿ ಮಧುಸೂಧನ್, ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್, ಸರ್ಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತಾ ಎಸ್, ಕಾಲೇಜು ಪಿಟಿಎ ಅಧ್ಯಕ್ಷ ಅಬ್ದುಲ್ ಖಾದರ್ ಬಿ.ಎಚ್, ಕಾಲೇಜು ಉಪ ಪ್ರಾಂಶುಪಾಲೆ ರಮಾ, ಸೆನೆಟ್ ಸದಸ್ಯ ರಾಜು ಎಂ.ಸಿ ಉಪಸ್ಥಿತರಿದ್ದರು.
ಮಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎ ಖಾದರ್ ಶಾ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.