ನವದೆಹಲಿ: ರಿಸರ್ವ್ ಬ್ಯಾಂಕ್ ನ ಲೆಕ್ಕಪತ್ರ ವರ್ಷದಲ್ಲಿ ಬದಲಾವಣೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಶನಿವಾರ ಹೇಳಿದ್ದಾರೆ.
ಆರ್ ಬಿಐನ ಹಣಕಾಸು ವರ್ಷ ಜುಲೈ 1 ರಿಂದ ಮುಂದಿನ ವರ್ಷದ ಜೂನ್ 30 ರವರೆಗೆ ಇದ್ದರೆ, ಕೇಂದ್ರ ಸರ್ಕಾರದ ಹಣಕಾಸು ವರ್ಷ ಏಪ್ರಿಲ್ 1 ರಿಂದ ಮುಂದಿನ ವರ್ಷ ಮಾರ್ಚ್ 31 ರವರೆಗೆ ಇರುತ್ತದೆ. ಆರ್ ಬಿಐನ ಲೆಕ್ಕಪತ್ರ ವರ್ಷವನ್ನು ಸರ್ಕಾರದೊಂದಿಗೆ ಹೊಂದಿಸಬೇಕು ಎಂದು ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ಬಿಮಲ್ ಜಲನ್ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಮ್ಮುಖದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಕ್ತಿಕಾಂತ್ ದಾಸ್, ರಿಸರ್ವ್ ಬ್ಯಾಂಕ್ ವರ್ಷ ಬದಲಾವಣೆಯನ್ನು ಸದ್ಯ ಪರಿಗಣಿಸಲಾಗುತ್ತಿದೆ. ಇದರ ಬಗ್ಗೆ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಶಕ್ತಿಕಾಂತ್ ದಾಸ್ ಅವರು, ಸರ್ಕಾರಕ್ಕೆ ಮಧ್ಯಂತರ ಲಾಭಾಂಶ ನೀಡುವ ಬಗ್ಗೆ ಆರ್ ಬಿ ಐ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಂಡ ತಕ್ಷಣವೇ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ. ಹಣಕಾಸು ನೀತಿ ಚೌಕಟ್ಟು ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಹಣಕಾಸು ನೀತಿ ಸಮಿತಿ (ಎಂಪಿಸಿ) ಚೌಕಟ್ಟು ಹೇಗೆ ಕಾರ್ಯನಿರ್ವಹಿಸಿದೆ ಎಂಬುದನ್ನು ರಿಸರ್ವ್ ಬ್ಯಾಂಕ್ ಆಂತರಿಕವಾಗಿ ಪರಿಶೀಲಿಸುತ್ತಿದೆ ಮತ್ತು ವಿಶ್ಲೇಷಿಸುತ್ತಿದೆ. ಸೂಕ್ತ ಸಮಯದಲ್ಲಿ ಅಗತ್ಯವಿದ್ದರೆ ಸರ್ಕಾರದೊಂದಿಗೆ ಸಂವಾದ ಮತ್ತು ಚರ್ಚೆಯನ್ನು ಬ್ಯಾಂಕ್ ನಡೆಸಲಿದೆ. ಸದ್ಯಕ್ಕೆ ಇದು ರಿಸರ್ವ್ ಬ್ಯಾಂಕ್ ನ ಪರಿಶೀಲನೆಯಲ್ಲಿದೆ ಎಂದು ಹೇಳಿದರು. ಆರ್ಥಿಕ ಸಮೀಕ್ಷೆಯ ಅಂದಾಜಿಗೆ ಅನುಗುಣವಾಗಿ ಆರ್ಥಿಕ ಪ್ರಗತಿ 6 ರಷ್ಟು ವೃದ್ಧಿಸುವ ಅಂದಾಜನ್ನು ರಿಸರ್ವ್ ಬ್ಯಾಂಕ್ ನೀಡಿದೆ ಎಂದು ಅವರು ಹೇಳಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಬಜೆಟ್ ಅಂದಾಜುಗಿಂತ ವಿತ್ತ ಕೊರತೆಯು ಹೆಚ್ಚಿರುವುದರಿಂದ, ಪರಿಷ್ಕøತ ಅಂದಾಜಿನ ಪ್ರಕಾರ ಸರ್ಕಾರ ಇದನ್ನು ಶೇ 0.5 ರಿಂದ 3.8 ಕ್ಕೆ ಹೆಚ್ಚಿಸಬೇಕಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ವಿತ್ತ ಕೊರತೆಯ ಗುರಿಯನ್ನು ಶೇ 3.5 ಕ್ಕೆ ನಿಗದಿಪಡಿಸಲಾಗಿದೆ.