ಪೆರ್ಲ: ಜಿಲ್ಲೆಯ ಆಡಳಿತ ವ್ಯವಸ್ಥೆಯ ವೇಗಕ್ಕೆ ಕಪ್ಪು ಚುಕ್ಕೆಯಂತಿದ್ದ ಹಳೆಯ ಕಾಲದ ಗುಂಪು ಗ್ರಾಮ ವ್ಯವಸ್ಥೆಯ ಸಮಸ್ಯೆ ಪರಿಹಾರಕ್ಕೆ ಹಲವು ವರ್ಷಗಳ ಬೇಡಿಕೆಯ ತರುವಾಯ ಕೊನೆಗೂ ಒಂದು ಹಂತದ ಯಶ ಲಭಿಸಿದ್ದು ಅತಿ ಹಿಮದುಳಿದ ಗ್ರಾಮವಾಗಿರುವ ಎಣ್ಮಕಜೆ ಗ್ರಾ.ಪಂ.ನ ಕಾಟುಕುಕ್ಕೆ ಗ್ರಾಮ ವಿಭಜಿಸಿ ನೂತನ ಪಡ್ರೆ ಗ್ರಾಮ ರಚನೆಗೆ ಬುಧವಾರ ತಿರುವನಂತಪುರದಲ್ಲಿ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಹಸಿರು ನಿಶಾನೆ ಲಭ್ಯವಾಗಿದೆ.
ಎಂಡೋ ಸಂತ್ರಸ್ಥರಲ್ಲಿ ದೊಡ್ಡ ಸಂಖ್ಯೆಯ ಪಾಲಿರುವ ಪಡ್ರೆ ಮತ್ತು ಕಾಟುಕುಕ್ಕೆ ಪ್ರದೇಶಗಳಿಗೆ ಈವರೆಗೆ ಕಾಟುಕುಕ್ಕೆಯಲ್ಲಿ ಕಾರ್ಯವೆಸಗುತ್ತಿದ್ದ ಗ್ರಾಮ ಕಚೇರಿಯೊಂದೇ ಆಶ್ರಯವಾಗಿತ್ತು. ಇದೀಗ ಸುಧೀರ್ಘ ಅವಧಿಯ ಬೇಡಿಕೆಯನ್ನು ಪರಿಗಣಿಸಿ ಕಾಟುಕುಕ್ಕೆ ಮತ್ತು ಪಡ್ರೆ ಗ್ರಾಮಗಳನ್ನು ವಿಭಜಿಸಿ ಪಡ್ರೆಗೆ ನೂತನ ಗ್ರಾಮ ಕಚೇರಿಗೆ ಸರ್ಕಾರ ಅನುಮತಿ ನೀಡಿದೆ.
ಕಾಸರಗೋಡು ಅಭಿವೃದ್ಧಿಗಾಗಿ ವರದಿ ನೀಡಲು ನೇಮಿಸಿದ ಡಾ. ಪ್ರಭಾಕರನ್ ಆಯೋಗ ವರದಿಯಲ್ಲೂ ಗುಂಪು ಗ್ರಾಮ ಕಚೇರಿಗಳ ವಿಭಜನೆಗಳ ಬಗ್ಗೆ ಉಲ್ಲೇಖ ಮಾಡಿತ್ತು. ಜಿಲ್ಲೆಯಲ್ಲಿ ಅದರಲ್ಲೂ ಮಂಜೇಶ್ವರ, ಕಾಸರಗೋಡು ತಾಲೂಕು ನಲ್ಲಿರುವ 13 ಗ್ರಾಮ ಕಚೇರಿಗಳನ್ನು ಕೂಡಲೇ ವಿಭಜಿಸಬೇಕು ಎಂದು 2012 ರಲ್ಲಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಎಂಟು ವರ್ಷಗಳ ಸುಧೀರ್ಘ ಅವಧಿಯಲ್ಲಿ ಇದೀಗ ಮೊದಲ ಗ್ರಾಮ ವಿಭಜನೆಯ ಆದೇಶ ಹೊರಬಿದ್ದಿರುವುದು ಆಶಾಭಾವನೆಗೆ ಕಾರಣವಾಗಿದೆ. ಗ್ರಾಮ ಕಚೇರಿ ವಿಂಗಡಣೆಗೆ ನಾಗರಿಕರು, ಹಲವು ಸಂಘಟನೆಗಳು ಹೋರಾಟ ನಡೆಸುತ್ತಲೇ ಬಂದಿದ್ದಾರೆ.
ಜಿಲ್ಲೆಯಲ್ಲಿ ಮಂಜೇಶ್ವರ ತಾಲೂಕಿನ ಕುಂಜತ್ತೂರು, ಹೊಸಬೆಟ್ಟು, ಕಡಂಬಾರ್, ಮಿಂಜ, ಕೊಡ್ಲಮೊಗರು, ವರ್ಕಾಡಿ, ಇಚ್ಲಂಗೋಡು, ಉಪ್ಪಳ, ಪೈವಳಿಕೆ ಕಯ್ಯಾರು, ಬಂಬ್ರಾಣ, ಕೊಯಿಪಾಡಿ, ಎಡನಾಡು, ಬಾಡೂರು, ಕಾಸರಗೋಡು ತಾಲೂಕಿನ ಕಾಸರಗೋಡು, ಚೆಂಗಳ, ಪಾಡಿ, ಕೂಡ್ಲು, ಆದೂರು, ಕುಂಬ್ಡಾಜೆ, ತೆಕ್ಕಿಲ್, ಕಳ್ನಾಡ್, ನೆಟ್ಟಣಿಗೆ, ಹೊಸದುರ್ಗ ತಾಲೂಕಿನ ಪಿಲಿಕ್ಕೋಡ್, ಪಳ್ಳಿಕೆರೆ, ಕ್ಲಾಯಿಕ್ಕೋಡ್, ವೆಳ್ಳರಿಕುಂಡು ತಾಲೂಕಿನ ಕರಿಂದಲಗಳಲ್ಲಿ ಇನ್ನೀಗ ಗುಂಪು ಗ್ರಾಮ ಕಚೇರಿಗಳಾಗಿ ಮುಂದುವರಿಯುತ್ತಿದೆ. ಈ ಗ್ರಾಮ ಕಚೇರಿ ವ್ಯಾಪ್ತಿಯ ಬರುವ ಗ್ರಾಮಗಳನ್ನು ವಿಭಜಿಸಿ ಆಯಾ ಗ್ರಾಮಗಳಿಗೆ ಕಚೇರಿ ನಿರ್ಮಿಸಿದ್ದಲ್ಲಿ ಜನರಿಗೆ ಅನುಕೂಲ ವಾಗಲಿದೆ. ಆದರೆ ಈ ಬಗ್ಗೆ ಹಲವು ಪ್ರತಿಭಟನೆ , ಮನವಿ ಜೊತೆಗೆ ಪ್ರಭಾಕರನ್ ಆಯೋಗದ ವರದಿ ಯಲ್ಲಿ ಶಿಪಾರಸು ಮಾಡಿದ್ದರೂ ಇನ್ನೂ ಕಾರ್ಯಗತ ಗೊಂಡಿಲ್ಲ. ಇದರಿಂದ ಜಿಲ್ಲೆಯ ಅದರಲ್ಲೂ ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶದದ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತಿದೆ.