ಮಂಜೇಶ್ವರ: ಬುಡ್ರಿಯ ಕಲ್ಲಗದ್ದೆಯ ಮೃತ್ಯಂಜಯ ಯುವಕ ವೃಂದ ಸಂಸ್ಥೆಯ ವಿಂಶತಿ ವಾರ್ಷಿಕೋತ್ಸವವು ಇತ್ತೀಚೆಗೆ ಸಂಭ್ರಮದಿಂದ ಜರಗಿತು.
ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮೀಂಜ ಗ್ರಾ.ಪಂ. ನಿವೃತ್ತ ಕಾರ್ಯದರ್ಶಿ ರವೀಂದ್ರ ಜೋಡುಕಲ್ಲು ಹಾಗೂ ನಾರಾಯಣ ನಾೈಕ್ ನಡುಹಿತ್ಲು ಕುಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ನಾರಾಯಣ ನಾೈಕ್ ಅವರು ಹಳ್ಳಿಯಂಗಳದಲ್ಲಿ ಯುವಕರನ್ನು ಒಗ್ಗೂಡಿಸಿ ಇಪ್ಪತ್ತು ವರ್ಷಗಳಿಂದ ಯುವಕವೃಂದವನ್ನು ಮುನ್ನಡೆಸಿದ ಕಾರ್ಯಕರ್ತರು ಅಭಿನಂದಾರ್ಹರು. ಹಾಗೂ ಯುವಕ ವೃಂದಕ್ಕೆ ಬೆನ್ನೆಲುಬಾಗಿ ನಿಂತ ಹಿರಿಯರನ್ನೂ ಅಭಿನಂದಿಸಬೇಕಿದೆ. ಸಮಾಜ ಸೇವೆಯಲ್ಲಿ ಯುವಕರು ಹೆಚ್ಚುಹೆಚ್ಚು ತೊಡಗಿಸಿಕೊಳ್ಳಬೇಕಿದೆ ಎಂದರು.
ಯುವಕ ವೃಂದದ ಅಧ್ಯಕ್ಷ ಸದಾಶಿವ ಅಮ್ಮೆನಡ್ಕ ಉಪಸ್ಥಿತರಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಅವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಮಾತನಾಡಿದ ಯೋಗೀಶ ರಾವ್ ಅವರು ನಮ್ಮ ಹಳ್ಳಿಗಳಲ್ಲಿ ಸಮಾಜ ಸೇವೆಗಾಗಿ ಬದುಕನ್ನು ಸವೆಸಿದ ಅನೇಕ ಪುಣ್ಯಾತ್ಮರಿದ್ದಾರೆ. ನಾಟಿವೈದ್ಯರು, ಜಾನಪದ ಕಲಾವಿದರು, ಕೂಲಿಕಾರ್ಮಿಕರು, ಭೂತಾರಾದನೆಯಲ್ಲಿ ತೊಡಗಿಸಿಕೊಂಡವರು ಹೀಗೆ ಮರೆಯಲ್ಲಿರುವ ಪ್ರತಿಭಾವಂತರನ್ನು ಗುರುತಿಸುವ ಗೌರವಿಸುವ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿ ಎಂದು ಅಭಿಪ್ರಾಯಪಟ್ಟರು.
ಮೃತ್ಯುಂಜಯ ಯುವಕ ವೃಂದದ ಗೌರವ ಸಲಹೆಗಾರ ವಸಂತ ಭಟ್ ತೊಟ್ಟೆತ್ತೋಡಿ ಸ್ವಾಗತಿಸಿ, ಅಭಿನಂದನಾ ಪತ್ರವಾಚಿಸಿದರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸನ್ಮಾನಿರ ಅಭಿನಂದನಾ ನುಡಿಗಳನ್ನಾಡಿದರು. ನಿತಿನ್ ಕಲ್ಲಗದ್ದೆ ವಂದಿಸಿದರು. ಅಶ್ವಿನಿಕುಮಾರ್ ಕಲ್ಲಗದ್ದೆ ನಿರೂಪಿಸಿದರು. ಸಭೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ಭ್ರಾಮರಿ ಕಲಾವಿದೆರ್ ಉಪ್ಪಳ ತಂಡದಿಂದ ಮುರಳಿ ಈ ಪಿರಬರೊಲಿ ತುಳು ಹಾಸ್ಯಮಯ ನಾಟಕ ಜರಗಿತು.