ತಿರುವನಂತಪುರ: ಪೌರತ್ವ ತಿದ್ದುಪಡಿಕಾಯ್ದೆ ವಿರುದ್ಧ ಕೇರಳದಲ್ಲಿ ಹೆಚ್ಚಿನ ಪ್ರತಿಭಟನೆ ಸದ್ದುಮಾಡುತ್ತಿರುವ ಮಧ್ಯೆ ಅಸ್ಸಾಂನಲ್ಲಿ ನೆಲೆನಿಂತಿದ್ದ ಬಾಂಗ್ಲಾ ವಲಸಿಗರು ಅನಧಿಕೃತವಾಗಿ ಕೇರಳಕ್ಕೆ ಬಂದು ಸೇರುತ್ತಿರುವ ಬಗ್ಗೆ ಗುಪ್ತಚರ ವಿಭಾಗ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಬಾಂಗ್ಲಾದೇಶದಿಂದ ಅನಧಿಕೃತವಾಗಿ ಭಾರತದೊಳಕ್ಕೆ ನುಗ್ಗಿ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಸೇರರ್ಪಡೆಗೊಂಡಿರುವ ಎರಡು ಲಕ್ಷಕ್ಕಿಂತಲೂ ಹೆಚ್ಚುಮಂದಿ ಸೂಕ್ತ ನೆಲೆ ಕಂಡುಕೊಳ್ಳಲು ಪ್ರಯತ್ನ ಮುಂದುವರಿಸುವ ಮಧ್ಯೆ, ಈ ಮಂದಿ ಕೇರಳದಲ್ಲಿ ನಡೆಯುತ್ತಿರುವ ಸಿಎಎ ವಿರುದ್ಧ ಪ್ರತಿಭಟನೆಯನ್ನು ಬಂಡವಾಳವನ್ನಾಗಿಸಲು ಯತ್ನಿಸುತ್ತಿದ್ದಾರೆ.
ಅಸ್ಸಾಂನಲ್ಲಿ ನೆಲೆಸಿರುವ ಎರಡು ಲಕ್ಷ ಮಂದಿ ಬಾಂಗ್ಲಾದೇಶೀಯರಲ್ಲಿ ಕೆಲವರು ಸ್ವಂತ ಹಾಗೂ ಇನ್ನು ಕೆಲವರು ಬಾಡಿಗೆಮನೆಗಳಲ್ಲಿ ವಾಸಿಸುತ್ತಿದ್ದಾರೆ. ಈ ರೀತಿ ಅನಧಿಕೃತವಾಗಿ ಬಂದು ನೆಲೆಸಿರುವವರನ್ನು ಪತ್ತೆಹಚ್ಚಿ ತೆರವುಗೊಳಿಸುವುದರ ಜತೆಗೆ ಅವರನ್ನು ಪ್ರತ್ಯೇಕ ಶಿಬಿರದಲ್ಲಿ ಕೂಡಿಹಾಕಲು ಚಿಂತನೆ ನಡೆಸುತ್ತಿರುವ ಮಧ್ಯೆ, ಕೆಲವರು ಇಲ್ಲಿಂದ ಪಲಾಯನಗೈದು ಕೇರಳದಲ್ಲಿ ಆಶ್ರಯ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ವಿಭಾಗ ನೀಡಿದೆ.
ಕೇರಳದಲ್ಲಿ ಈಗಾಗಲೇ ಲಕ್ಷಾಂತರಮಂದಿ ಇತರ ರಾಜ್ಯ ಕಾರ್ಮಿಕರಿದ್ದು, ವಿವಿಧ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಆಡಳಿತ, ಪ್ರತಿಪಕ್ಷ ಹಾಗೂ ಸರ್ಕಾರ ಸಮಾನ ನಿಲುವು ಹೊಂದಿರುವುದಲ್ಲದೆ, ರಾಜ್ಯ ವಿಧಾನಸಭೆಯಲ್ಲಿ ಈ ಬಗ್ಗೆ ಗೊತ್ತುವಳಿಯನ್ನೂ ಮಂಡಿಸಿರುವ ಹಿನ್ನೆಲೆಯಲ್ಲಿ ಈ ನುಸುಳುಕೋರರು ಕೇರಳವನ್ನು ತಮಗಿರುವ ಸುರಕ್ಷಿತ ತಾಣವನ್ನಾಗಿ ಪರಿಗಣಿಸಿ ಇತ್ತ ಮುಖ ಮಾಡುವ ಸಾಧ್ಯತೆಯಿರುವುದಾಗಿಯೂ ಮಾಹಿತಿಯಿದೆ. ಈಗಾಗಲೇ ಕಾಸರಗೋಡು, ಕಣ್ಣೂರು, ಕೋಯಿಕ್ಕೋಡು, ಮಲಪ್ಪುರಂ ಒಳಗೊಂಡಂತೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದುಸೇರಿದ್ದು, ಇವರೆಲ್ಲರೂ ತಮ್ಮನ್ನು ಒಂದಲ್ಲ ಒಂದು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರೀತಿ ಕೇರಳಕ್ಕೆ ಆಗಮಿಸಿರುವವರ ಬಗ್ಗೆ ಒಂದೆಡೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಪರಾಧ ಕೃತ್ಯ ತಡೆಗಟ್ಟುವ ಉದ್ದೇಶದಿಂದ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಪೊಲೀಸರು ಸ್ಪಷ್ಟನೆ ನೀಡುತ್ತಿದ್ದಾರೆ.