ಮುಳ್ಳೇರಿಯ: ಕಾಡಾನೆ ಹಾವಳಿಯಿಂದ ಕೃಷಿಕರನ್ನು ರಕ್ಷಿಸಬೇಕೆಂದು ಆಗ್ರಹಿಸಿ ಕಾರಡ್ಕ ಅರಣ್ಯ ಕಚೇರಿಯ ಮುಂದೆ ಬಿಜೆಪಿ ಕರ್ಷಕ ಮೋರ್ಚಾ ಕಾಸರಗೋಡು ಮಂಡಲ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ಧರಣಿಯನ್ನು ಉದ್ಘಾಟಿಸಿದ ಕರ್ಷಕ ಮೋರ್ಚಾ ಜಿಲ್ಲಾ ಅಧ್ಯಕ್ಷ ಇ.ಕೃಷ್ಣನ್ ಅವರು ಮಾತನಾಡಿ ಕಾಡಾನೆ ಹಾವಳಿಯಿಂದ ಕೃಷಿ ನಾಶನಷ್ಟ ಸಂಭವಿಸಿದವರಿಗೆ ತುರ್ತು ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು. ಕರ್ನಾಟಕ ಗಡಿಗೆ ತಾಗಿಕೊಂಡಿರುವ ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಅ„ಕವಾಗುತ್ತಿದೆ. ಗಡಿಪ್ರದೇಶದ ಕೃಷಿ ತೋಟಗಳಿಗೆ ನುಗ್ಗುವ ಕಾಡಾನೆಗಳು ಕೃಷಿ ನಾಶಗೊಳಿಸುತ್ತಿದೆ. ಇದರಿಂದಾಗಿ ಕೃಷಿಕರು ಬೆಳೆದ ಬೆಳೆ ನಷ್ಟವಾಗಿ ಕಂಗಾಲಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಡಾನೆ ಹಾವಳಿಯಿಂದ ಕೃಷಿ ನಾಶ ಸಂಭವಿಸಿದ ಕೃಷಿಕರಿಗೆ ನಷ್ಟ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು.
ನೇತಾರರಾದ ಕೆ.ಕೆ.ವೇಣುಗೋಪಾಲನ್, ರಾಧಾಕೃಷ್ಣನ್, ಎಡಪಣಿ ಬಾಲಕೃಷ್ಣನ್, ಕೊರಗ ನಾಯ್ಕ್ ಮೊದಲಾದವರು ಮಾತನಾಡಿದರು. ಕೃಷ್ಣ ಭಟ್ ಸ್ವಾಗತಿಸಿದರು. ಗೋಪಾಲಕೃಷ್ಣ ವಂದಿಸಿದರು.