ಅಹಮದಾಬಾದ್ : ಅಮೆರಿಕಾ ಭಾರತ ದೇಶವನ್ನು ಪ್ರೀತಿಸಲಿದ್ದು, ನಿಷ್ಟತೆಯಿಂದ ಇರುವುದಾಗಿ ಹೇಳಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗಿನ ಸಂಬಂಧ ತಮ್ಮ ದೇಶಕ್ಕೆ ವಿಶೇಷ ಸ್ಥಾನವನ್ನು ಕಲ್ಪಿಸಿರುವುದಾಗಿ ಪ್ರತಿಪಾದಿಸಿದ್ದಾರೆ.
ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಳೆ ಭಾರತದೊಂದಿಗೆ ಮೂರು ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು. ನವದೆಹಲಿಯಲ್ಲಿ ಈ ಒಪ್ಪಂದ ಸಂಬಂಧ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ಉನ್ನತ ಮಟ್ಟದ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ.ಇಸ್ಲಾಮಿಕ್ ಉಗ್ರರ ಬೆದರಿಕೆಯಿಂದ ನಾಗರಿಕನ್ನು ರಕ್ಷಿಸಲು ಉಭಯ ದೇಶಗಳು ಬದ್ದವಾಗಿವೆ. ತಮ್ಮ ಆಳ್ವಿಕೆಯಲ್ಲಿ ಐಎಸ್ ಐಎಸ್ ಉಗ್ರರ ಮಟ್ಟಹಾಕಲು ಅಮೆರಿಕಾ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಪ್ರಸ್ತುತ ಶೇ. 100 ರಷ್ಟು ಐಎಸ್ ಐಸ್ ಉಗ್ರರನ್ನು ನಿಮೂರ್ಲನೆ ಮಾಡಲಾಗಿದೆ. ಉಗ್ರ ಅಲ್ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದರು. ಎಲ್ಲ ದೇಶಗಳು ಭದ್ರತೆಗೆ ಆದ್ಯತೆ ನೀಡಲಿದ್ದು, ಅಮೆರಿಕಾ ತನ್ನ ಸಿದ್ದಾಂತಗನುಗುಣವಾಗಿ ಕಾರ್ಯನಿರ್ವಹಿಸಲಿದೆ. ಜಗತ್ತಿನಾದ್ಯಂತ ಭೀತಿಗೆ ಕಾರಣವಾಗಿರುವ ಭಯೋತ್ಪಾದನೆ ಮಟ್ಟಹಾಕಲು ವಿಶೇಷ ಹೋರಾಟ ನಡೆಸುವುದಾಗಿ ತಿಳಿಸಿದರು. ಭಾರತಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ಮೋದಿಯನ್ನು ಅಸಾಧಾರಣ ನಾಯಕ ಎಂದು ಬಣ್ಣಿಸಿದ ಡೊನಾಲ್ಡ್ ಟ್ರಂಪ್, ಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಮೋದಿ ಜೀವಂತ ಸಾಕ್ಷಿಯಾಗಿದ್ದಾರೆ. ಚಹಾ ಮಾರಿ ಮುಂದೆ ಬಂದಿರುವ ಮೋದಿ, 2019ರ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಭಾರಿಸಿದ್ದಾರೆ ಎಂದು ಕೊಂಡಾಡಿದರು.
ವಿಶ್ವದ ದೊಡ್ಡ ಆರ್ಥಿಕತೆಯಾಗಿರುವ ಭಾರತ ಆರ್ಥಿಕ ಕ್ಷೇತ್ರದಲ್ಲಿ ದೈತ್ಯ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಇಲ್ಲಿ ಅಭೂತಪೂರ್ವ ಸ್ವಾಗತ ದೊರಕಿದೆ ಎಂದು ಹೇಳಿದ ಟ್ರಂಪ್, ಭಾರತ ಅದ್ಬುತ ರಾಷ್ಟ್ರ ಎಂದು ಬಣ್ಣಿಸಿದರು. ಬಾಲಿವುಡ್ ನ ದಿಲ್ ವಾಲ್ ದಿಲ್ಹಾನಿಯಾ ಲೆ ಜಯೆಂಗೆ, ಶೊಲೆ ಮತ್ತಿತರ ಬಾಲಿವುಡ್ ಚಿತ್ರಗಳ ಯಶಸ್ವಿಯನ್ನು ಉಲ್ಲೇಖಿಸಿದ ಟ್ರಂಪ್, ಸಚಿನ್ ತೆಂಡೊಲ್ಕರ್, ವಿರಾಟ್ ಕೊಹ್ಲಿ ಅದ್ಬುತ ಕ್ರೀಡಾಪಟುಗಳಾಗಿದ್ದಾರೆ. ಇಲ್ಲಿನ ವೈವಿಧ್ಯಮಯ ಸಂಸ್ಕøತಿ ಮನಸೂರೆಗೊಳಿಸಿದೆ ಎಂದು ಹೇಳಿದರು.
ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿನ ಬಡತನ ನಿರ್ಮೂಲನೆಯಾಗಲಿದ್ದು, ಅತಿ ದೊಡ್ಡ ಮಧ್ಯಮ ವರ್ಗದ ಜನರು ವಾಸಿಸುವ ನೆಲೆಯಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ಭವಿಷ್ಯ ನುಡಿದರು.