ಮುಂಬೈ: ಈ ದೇಶ ಜನ್ ಕೀ ಬಾತ್ ನಿಂದ ಮುನ್ನಡೆಯ ಬೇಕೇ ಹೊರತು, ಮನ್ ಕೀ ಬಾತ್ ನಿಂದಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಆಪ್ ಪಕ್ಷ 63 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮೂರನೇ ಬಾರಿಗೆ ಅಧಿಕಾರದ ಗುದ್ದುಗೆ ಏರುವುದು ಖಚಿತವಾಗಿದೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಉದ್ಧವ್ ಠಾಕ್ರೆ ಅವರು, ದೆಹಲಿ ಚುನಾವಣೆಯಲ್ಲಿ ಅಭೂತ ಪೂರ್ವ ವಿಜಯ ಸಾಧಿಸಿರುವ ಆಪ್ ಮತ್ತು ಅರವಿಂದ್ ಕೇಜ್ರಿವಾಲ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಈ ಚುನಾವಣಾ ಫಲಿತಾಂಶದ ಮೂಲಕ ಜನ ಈ ದೇಶ ಜನ್ ಕೀ ಬಾತ್ ನಿಂದ ಮುನ್ನಡೆಯ ಬೇಕೇ ಹೊರತು, ಮನ್ ಕೀ ಬಾತ್ ನಿಂದಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಜೊತೆಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದ ಬಿಜೆಪಿ ಅವರನ್ನು ಸೋಲಿಸಲು ಸಾಧ್ಯವಾಗಲೇ ಇಲ್ಲ. ದೆಹಲಿಯಲ್ಲಿ ಬಿಜೆಪಿ ಅಲ್ಪ ಜಯ ಸಿಕ್ಕಿದ್ದು, ಇದು ಅವರ ಒಡೆದು ಆಳುವ ನೀತಿಯನ್ನು ಜನ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎನ್ನುವುದಕ್ಕೆ ದೊರೆತ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.