ಪೆರ್ಲ: ಮಾರಕ ಕೀಟನಾಶಕ ಎಂಡೋಸಲ್ಫಾನ್ ನ ದುಷ್ಪರಿಣಾಮಕ್ಕೆ ಈಡಾದ ನಮ್ಮ ನಾಡಿನ ಪ್ರದೇಶಗಳಲ್ಲಿ ಒಂದಾಗಿರುವ ಎಣ್ಮಕಜೆ ಗ್ರಾಮದಲ್ಲಿ ಲೈಫ್ ಮಿಷನ್ ಯೋಜನೆ ಮೂಲಕ ಅನೇಕ ಮಂದಿಯ ನಿರೀಕ್ಷೆ ನನಸಾಗುತ್ತಿದೆ. ರಾಜ್ಯ ಸರ್ಕಾರ ಬಹುನಿರೀಕ್ಷೆಯೊಂದಿಗೆ ಜಾರಿಗೊಳಿಸುತ್ತಿರುವ ಈ ಯೋಜನೆ ಮೂಲಕ ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬ ಬಡಜನತೆಯ ಕನಸು ನಿಜವಾಗುತ್ತಿದೆ. ಇದಕ್ಕೊಂದು ನಿರ್ದಶನವಾಗಿ ಇಲ್ಲಿನ ಶಿವಗಿರಿಯ ರಾಮನಾಯ್ಕ್ ಅವರ ಕುಟುಂಬ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಾ ನೆಮ್ಮದಿಯ ಬದುಕನ್ನು ಕಾಣುತ್ತಿದೆ.
ಹೋಟೆಲೊಂದರ ಕಾರ್ಮಿಕರಾಗಿದ್ದ ರಾಮನಾಯ್ಕ್ ಅವರ ಅನಿರೀಕ್ಷಿತವಾಗಿ ಅಸೌಖ್ಯಕ್ಕೀಡಾದ ಪರಿಣಾಮ ಕೆಲಸಕ್ಕೆ ತೆರಳಲಾರದೆ ಬಳಲುವಂತಾಗಿತ್ತು. ಇವರ ದುಡಿಮೆಯನ್ನೇ ಆಶ್ರಯಿಸಿದ್ದ ಮನೆಮಂದಿ ಕಂಗೆಟ್ಟಿದ್ದರು. ಶಿಥಿಲ ಮನೆಯಲ್ಲಿ ವಾಸವಾಗಿದ್ದ ಇವರು ವಯೋವೃದ್ಧ ತಂದೆ, ಪತ್ನಿ, ಇಬ್ಬರು ಹೆಣ್ಣುಮಕ್ಕಳಿಗೆ ಆಸರೆಯಾಗಿದ್ದರು. ಲೈಫ್ ಮಿಷನ್ ಯೋಜನೆಗೆ ಇವರು ಸಲ್ಲಿಸಿದ್ದ ಅರ್ಜಿ ಫಲಕಾರಿಯಾ ಪರಿಣಾಮ ಇವರು ಫಲಾನುಭವಿ ಪಟ್ಟಿಯನ್ನು ಸೇರಿದ್ದರು. ಮೀಸಲಾತಿ ವಿಭಾಗದ ಮರಾಠಿ ಜನಾಂಗಕ್ಕೆ ಸೇರಿದ ಇವರಿಗೆ ಲೈಫ್ ಮಿಷನ್ ನಿಂದ 6 ಲಕ್ಷ ರೂ., ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯಿಂದ 2 ಲಕ್ಷ ರೂ. ಲಭಿಸಿತ್ತು. ಇದರ ಪರಿಣಾಮ ತಮ್ಮ 6 ಸೆಂಟ್ಸ್ ಜಾಗದಲ್ಲಿ ಇಂದು ಸುದೃಡ, ಸುಂದರ ಮನೆಯನ್ನು ಹೊಂದುವಂತಾಗಿದೆ. 2018 ಮೇ ತಿಂಗಳಲ್ಲಿ ನಿರ್ಮಾಣ ಆರಂಭಗೊಂಡ ಮನೆ 2019 ಡಿಸೆಂಬರ್ನಲ್ಲಿ ಪೂರ್ಣಗೊಂಡಿತ್ತು.
ಅಸೌಖ್ಯದ ನಡುವೆಯೂ ಸ್ವಂತ ಮನೆ ಹೊಂದುವಂತಾದದ್ದು, ರಾಮನಾಯ್ಕ್ ಅವರಿಗೆ ನೆಮ್ಮದಿಯನ್ನು ತಂದಿತ್ತಿದೆ. ಇದಕ್ಕಾಗಿ ಅವರ ಕುಟುಂಬ ರಾಜ್ಯ ಸರಕಾರಕ್ಕೆ ಮತ್ತು ಎಣ್ಮಕಜೆ ಗ್ರಾಮಪಂಚಾಯತ್ ಗೆ ಕೃತಜ್ಞವಾಗಿದೆ.
ಏನಂತಾರೆ
ಫಲಾನುಭವಿಗಳಿಗೆ ನಿರೀಕ್ಷೆ:
ಲೈಫ್ ಮಿಷನ್ ಮೂಲಕ ರಾಮನಾಯ್ಕ್ ಅವರಿಗೆ ನೂತನ ವಸತಿ ಲಭಿಸಿರುವುದು, ಪಂಚಾಯತ್ ನ ಇನ್ನಷ್ಟು ಫಲಾನುಭವಿಗಳಿಗೆ ನಿರೀಕ್ಷೆ ಮೂಡಿಸಿದೆ. ಎಣ್ಮಕಜೆ ಪಂಚಾಯತ್ ಸದಸ್ಯರು ಈ ನಿಟ್ಟಿನಲ್ಲಿ ಸತತ ಯತ್ನ ನಡೆಸುತ್ತಿದ್ದಾರೆ.
ಪುಟ್ಟಪ್ಪ ಖಂಡಿಗೆ, ಸದಸ್ಯ, ಎಣ್ಮಕಜೆ ಗ್ರಾಮಪಂಚಾಯತ್.
.................................................................................................................................
ಲೈಫ್ ಮಿಷನ್ ಯೋಜನೆ ಮೂಲಕ ಮೀನುಗಾರ ಇಬ್ರಾಹಿಂ ಅವರಿಗೆ ಲಭಿಸಿದ್ದು ಸಮಾಧಾನದ ಬದುಕು
ಕುಂಬಳೆ: ಮೀನುಗಾರ ಇಬ್ರಾಹಿಂ ಅವರಿಗೆ ಈಗ ನೆಮ್ಮದಿಯಲ್ಲಿದ್ದಾರೆ. ಶಿಥಿಲವಾದ ಮನೆಯಲ್ಲಿದ್ದ ಇವರ ಕುಟುಂಬದ ಸದಸ್ಯರು ಈಗ ಸ್ವಂತ, ಸುದೃಡ ನಿವಾಸದಲ್ಲಿ ಸುರಕ್ಷಿತರಾಗಿದ್ದಾರೆ. ಲೈಫ್ ಮಿಷನ್ ಯೋಜನೆ ಮೂಲಕ ತಮ್ಮದ್ದಾದ ಒಂದು ಮನೆಯ ಕನಸು ನನಸಾಗಿದೆ.
ಕುಂಬಳೆ ಗ್ರಾಮಪಂಚಾಯತ್ ನ ಮೊಗ್ರಾಲ್ ಕೊಪ್ಪಳ ಕರಾವಳಿಯಲ್ಲಿ ದಾನ ರೂಪದಲ್ಲಿ ಲಭಿಸಿದ 6 ಸೆಂಟ್ಸ್ ಜಾಗದಲ್ಲಿ ಸ್ವಂತದ್ದೊಂದು ಸೂರು ಬೇಕು ಎಂಬ ಇವರ ಬಹುಕಾಲದ ಆಶಯಕ್ಕೆ ರಾಜ್ಯ ಸರಕಾರದ ಲೈಫ್ ಮಿಷನ್ ಯೋಜನೆ ಹೆಗಲು ನೀಡಿದೆ. ಈ ಮೂಲಕ ಲಭಿಸಿರುವ 4 ಲಕ್ಷ ರೂ. ಮನೆಕಟ್ಟಿಕೊಳ್ಳಲು ಬಲುದೊಡ್ಡ ಯೋಗದಾನವಾಗಿದೆ. 2018 ಮಾರ್ಚ್ ತಿಂಗಳಲ್ಲಿ ಇವರ ನಿವಾಸದ ನಿರ್ಮಾಣ ಆರಂಭಗೊಂಡಿತ್ತು. 2019 ಡಿಸೆಂಬರ್ ತಿಂಗಳಲ್ಲಿ ಪೂರ್ಣತೆ ಕಂಡಿತ್ತು.
ಮೀನುಗಾರಿಕೆ ವಲಯ ಮುಗ್ಗಟ್ಟು ಅನುಭವಿಸುತ್ತಿರುವ ಅವಧಿಯಲ್ಲಿ ಕೂಲಿಕಾರ್ಮಿಕನಕ್ಕೆ ತೆರಳಬೇಕಾದ ಸ್ಥಿತಿ ಇವರಿಗೆ ನಿರ್ಮಾಣವಾದಾಗ ಸ್ವಂತ ಮನೆಬೇಕು ಎಂಬ ಬಯಕೆ ಈಡೇರುವುದು ಇವರ ಮಟ್ಟಿಗೆ ಸಣ್ಣ ವಿಚಾರವೇನೂ ಆಗಿರಲಿಲ್ಲ. ಈ ನಿಟ್ಟಿನಲ್ಲಿ ಕುಂಬಳೆ ಗ್ರಾಮಪಂಚಾಯತ್ ಪದಾಧಿಕಾರಿಗಳ ಸಹಕಾರವೂ ಪೂರಕವಾಗಿತ್ತು ಎಂದು ಅವರು ತಿಳಿಸುತ್ತಾರೆ. 9ನೇ ತರಗತಿಯಲ್ಲಿ ಮತ್ತು 4 ನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ಇಬ್ಬರು ಗಂಡುಮಕ್ಕಳೂ, ಪತ್ನಿ ಮತ್ತು ತಮ್ಮ ಹಿರಿಯ ಸಹೋದರನ ಜೊತೆಗೆ ಇವರು ನೂತನ ಭವನದಲ್ಲಿ ವಾಸಿಸುತ್ತಿದ್ದಾರೆ.