ಮುಂಬೈ: ಭಾರತ ದೇಶ ಪ್ರಮುಖ ಡಿಜಿಟಲ್ ಸಮಾಜವಾಗಿ ರೂಪುಗೊಳ್ಳುವ ಪರಿವರ್ತನೆಯ ಹಂತದಲ್ಲಿದ್ದು ವಿಶ್ವದ ಪ್ರಮುಖ ಮೂರು ಆರ್ಥಿಕ ರಾಷ್ಟ್ರಗಳ ಪೈಕಿ ಒಂದು ಎನಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.
ಮೈಕ್ರೊಸಾಫ್ಟ್ ಮುಖ್ಯಸ್ಥ ಸತ್ಯ ನಡೆಲ್ಲಾ ಜೊತೆ ಅವರು ಸೋಮವಾರ ಮುಂಬೈಯಲ್ಲಿ ಫ್ಯೂಚರ್ ಡಿಕೊಡೆಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಭಾರತದ ಹಳ್ಳಿಹಳ್ಳಿಗಳಿಗೆ ಮೊಬೈಲ್ ಸಂಪರ್ಕ ಕಲ್ಪಿಸಿ ಹಿಂದೆಂದಿಗಿಂತಲೂ ಈಗ ಅತ್ಯಂತ ವೇಗವಾಗಿ ಮೊಬೈಲ್ ನೆಟ್ ವರ್ಕ್ ಸಿಗುವಂತೆ ಮಾಡುವುದು ಡಿಜಿಟಲ್ ರೂಪಾಂತರದ ಪ್ರಮುಖ ಸವಾಲಾಗಿತ್ತು ಎಂದರು. ಪ್ರಧಾನಿಯಾಗಿ ನರೇಂದ್ರ ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಡಿಜಿಟಲ್ ಭಾರತಕ್ಕೆ ಒಂದು ದೃಷ್ಟಿಕೋನ ನೀಡಿದರು. ಇಂದು ಜಿಯೊ 4ಜಿ ತಂತ್ರಜ್ಞಾನಕ್ಕೆ 380 ದಶಲಕ್ಷ ಜನರು ಮೊರೆ ಹೋಗಿದ್ದಾರೆ. ಜಿಯೊ ತಂತ್ರಜ್ಞಾನ ಬರುವುದಕ್ಕೆ ಮೊದಲು ಡಾಟಾದ ವೇಗ 256 ಕೆಬಿಪಿಎಸ್ ಗಳಿದ್ದು ಜಿಯೊ ಬಂದ ಮೇಲೆ 21 ಎಂಬಿಪಿಎಸ್ ಆಗಿದೆ ಎಂದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಬಗ್ಗೆ ಮಾತನಾಡಿದ ಅವರು, ಹಿಂದಿನ ಅಮೆರಿಕ ಅಧ್ಯಕ್ಷರು ಬಂದಿದ್ದಾಗಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಭಾರತದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಹಿಂದೆ ಭಾರತದಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುವುದರ ಸಮಸ್ಯೆಯಿತ್ತು. ಇಂದು ಅದು ಬಹಳಷ್ಟು ಕಡಿಮೆಯಾಗಿದೆ. ಭಾರತ ವಿಶ್ವದ ಪ್ರಮುಖ ಮೂರು ಆರ್ಥಿಕ ರಾಷ್ಟ್ರಗಳಲ್ಲಿ ಒಂದು ದೇಶವೆಂದು ಎನಿಸಿಕೊಳ್ಳಲಿದೆ, ಅದು ಇನ್ನು 5 ವರ್ಷಗಳಲ್ಲಿಯೇ, ಅಥವಾ 10 ವರ್ಷಗಳಲ್ಲಿಯೇ ಎಂಬುದು ಈಗಿರುವ ಸಂಗತಿ ಎಂದರು.
ನಾವು ಬೆಳೆದ ಪರಿಸ್ಥಿತಿ ಭಿನ್ನವಾಗಿತ್ತು ಎಂದು ಸತ್ಯ ನಡೆಲ್ಲಾ ಅವರನ್ನುದ್ದೇಶಿಸಿ ಹೇಳಿದ ಮುಕೇಶ್ ಅಂಬಾನಿ ಭಾರತದ ಮುಂದಿನ ಜನಾಂಗ ವಿಭಿನ್ನ ಭಾರತವನ್ನು ಕಾಣಲಿದೆ ಎಂದರು.