ಕುಂಬಳೆ: ಸಾಹಿತ್ಯವೆಂದರೆ ಅದೊಂದು ಮಹಾಸಾಗರ.ಅದರೊಳಗೆ ಮುತ್ತುರತ್ನಗಳೇ ಮೊದಲಾದ ಅನಘ್ರ್ಯ ಸಂಪತ್ತುಗಳಿವೆ. ಜೀವದ ಹಂಗು ತೊರೆದು ಸಾಗರದಾಳಕ್ಕಿಳಿದು ಹುಡುಕಿದವನಿಗೆ ಮಾತ್ರ ಅಮೂಲ್ಯ ಈ ಸಂಪತ್ತು ದೊರಕ ಬಲ್ಲದು. ಅಂತೆಯೇ ಸಾಹಿತ್ಯವೂ ಒಂದು ಸಾಗರ. ಸಾಹಿತ್ಯ ಸಾಗರದಲ್ಲಿಯೂ ಹಲವು ಪ್ರಕಾರಗಳ ಮುತ್ತುರತ್ನ ಸಂಪತ್ತುಗಳಿವೆ. ಆಳವಾಗಿ ಅಭ್ಯಾಸ ಮಾಡಿದ ಸಾಧಕನಿಗೆ ಮಾತ್ರ ಆ ಸಂಪತ್ತು ದೊರೆಯುವುದು. ಅಂಥವರಿಗೆ ಸರಸ್ವತಿಯ ಅನುಗ್ರಹವೂ ಆಗ ಬಲ್ಲುದು ಎಂದು ಕವಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರು ಹೇಳಿದರು.
ಅವರು ಬಳ್ಳಾರಿ ಜಿಲ್ಲೆಯ ಲಿಂಗನಾಯಕನಹಳ್ಳಿಯಲ್ಲಿ ಇತ್ತೀಚೆಗೆ ನಡೆದ 11 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕವಿತೆ ಅಥವಾ ಕಾವ್ಯವೂ ಒಂದು ಜನಮನವನ್ನು ಶೀಘ್ರವಾಗಿ ತಲುಪುವ ಸಾಹಿತ್ಯವೆಂದರೆ ಕವಿತೆ. ಅಲ್ಲಿ ಆಸ್ವಾದನೆ ಇದೆ.ಸಂತೋಷ ಇದೆ.ಹೊಸಭರವಸೆಯೂ ಇದೆ. ಮನುಷ್ಯ ಜೀವನದ ಒಳಹೊರಗುಗಳ ನೈಜ ಚಿತ್ರಣವಿದೆ. ಪ್ರಕೃತಿಯ ನಿಜವಾದ ಜೀವಸತ್ವವೇ ಕಾವ್ಯದಲ್ಲಿ ಅಡಗಿದೆ. ಅದನ್ನು ಆಯ್ದು ಆಸ್ವಾದಿಸಿ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕಾದುದು ಪ್ರತಿಯೊಬ್ಬನ ಕರ್ತವ್ಯ ಎಂದು ಅವರು ಅಭಿಪ್ರಾಯಪಟ್ಟರು.
ವಿಶ್ವದ ಏಕೈಕ ಎಂಬ ಕೀರ್ತಿಗೆ ಪಾತ್ರರಾಗಿರುವ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಕೇಂದ್ರ ಬಿಂದುವೇ ಕವಿಗೋಷ್ಠಿ. ಸುಮಾರು 80 ರಷ್ಟು ಕವಿಗಳು ತಮ್ಮ ಕವನಗಳನ್ನು ಮಂಡಿಸುವ ಮಹಾಸಾಹಸವನ್ನು ಮಾಡಿದ್ದಾರೆ. ಸಮ್ಮೇಳನದ ರೂವಾರಿ ಡಾ.ಶೇಖರ ಅಜೆಕಾರು ಅವರ ಪ್ರಯತ್ನ ಶ್ಲಾಘನೀಯ ಎಂದು ಅವರು ನುಡಿದರು.
ಕವಿಗೋಷ್ಠಿಯನ್ನು ಮೇಲುಗದ್ದೆ ಸಂಸ್ಥಾನ ಇಟಗಿ ಇಲ್ಲಿನ ಪೀಠಾಧಿಪತಿ ಶ್ರೀ ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿ ಈ ಸಮ್ಮೇಳನ ವಿಶೇಷ ಅನುಭೂತಿ ಎಂದು ಬಣ್ಣಿಸಿದರು. ಸಮ್ಮೇಳನಾಧ್ಯಕ್ಷೆ ಭುವನೆಶ್ವರಿ ಹೆಗಡೆ, ಶೇಖರ ಚಿತ್ರಾಪು ಪುಣೆ, ಡಾ.ಶೇಖರ ಅಜೆಕಾರು, ನಾಗಪ್ಪ ಕುರುವತ್ತಿಗೌಡರ್, ವೀರಣ್ಣ ಕುರುವತ್ತಿ ಗೌಡರ್ ಉಪಸ್ಥಿತರಿದ್ದರು.