ದುಬೈ: ಯುಎಇನಲ್ಲಿರುವ ಭಾರತೀಯರೊಬ್ಬರಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಭಾರತೀಯರೊಬ್ಬರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಯುಎಇಯಲ್ಲಿ ಸೋಂಕು ಪೀಡಿತರ ಸಂಖ್ಯೆ ಈವರೆಗೂ 8ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕೊರೋನಾ ವೈರಸ್ ಸೋಂಕು ತಗುಲಿದ ವ್ಯಕ್ತಿಯನ್ನು ಭೇಟಿ ಮಾಡಿದ ಬಳಿಕ ಭಾರತೀಯ ಪ್ರಜೆಯಲ್ಲಿಯೂ ಇದೀಗ ಸೋಂಕು ಪತ್ತೆಯಾಗಿದೆ. ಇದರಂತೆ ಸೋಂಕು ತಗುಲಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಮಾರಕ ಕೊರೋನಾ ವೈರಸ್ ಚೀನಾದಲ್ಲಿ ಮರಣ ಮೃದಂಗವನ್ನು ಮುಂದುವರೆಸಿದ್ದು, ಸಾವನ್ನಪ್ಪಿದವರ ಸಂಖ್ಯೆ 1000ಕ್ಕೆ ಏರಿಕೆಯಾಗಿದೆ. ಈ ನಡುವೆ ವೈರಸ್ ಕುರಿತಂತೆ ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥ, ವೈರಾಣು ಪ್ರವೇಶದ ಸಂಭಾವ್ಯತೆ ಎದುರಿಸಲು ಎಲ್ಲಾ ದೇಶಗಳೂ ಸಜ್ಜಾರಿಗಬೇಕಿದೆ. ಏಕೆಂದರೆ ಚೀನಾಕ್ಕೆ ಪ್ರಯಾಣ ಮಾಡಿಲ್ಲದವರಲ್ಲೂ ಈ ವೈರಸ್ ಕಂಡುಬಂದಿರುವ ಕಳವಳಕಾರಿ ನಿದರ್ಶನಗಳು ಪತ್ತೆಯಾಗಿವೆ ಎಂದು ಹೇಳಿದೆ.
ಇದರ ಬೆನ್ನಲ್ಲೆ, ಚೀನಾದಲ್ಲಿ ಕಂಡುಬಂದಿರುವ ಕೊರೋನಾ ವೈರಸ್ ಎಂಬುದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಹಾಗೂ ಸಂಭಾವ್ಯ ಅಪಾಯ ಎಂದು ಸಾರಿರುವ ಬ್ರಿಟನ್ ಸರ್ಕಾರ, ವೈರಸ್ ಸೋಂಕಿತರನ್ನು ಬಲವಂತಾಗಿ ವಶಕ್ಕೆ ಪಡೆಯಲಾಗುವುದು. ಮುಕ್ತವಾಗಿ ಓಡಾಡಲು ಬಿಡುವುದಿಲ್ಲ ಎಂದು ಪ್ರಕಟಿಸಿದೆ.