ಕುಂಬಳೆ: ಕುಂಬಳೆ ಇಚ್ಲಂಪಾಡಿ ದರ್ಬಾರ್‍ಕಟ್ಟೆ ಸಮೀಪದ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಮಾ.7ರ ತನಕ ನಡೆಯಲಿದೆ.
ಶನಿವಾರ ಬೆಳಿಗ್ಗೆ 5 ರಿಂದ ವಿವಿಧ ವೈಧಿಕ ಕಾರ್ಯಕ್ರಮಗಳು ತಂತ್ರಿವರ್ಯರ ನೇತೃತ್ವದಲ್ಲಿ ಆರಂಭಗೊಂಡಿತು. ಮಧ್ಯಾಹ್ನ ಅನ್ನದಾನ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಶುಕ್ರವಾರ ಸಂಜೆ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ವಿಶೇಷವಾಗಿ ಆಗಮಿಸಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ಕ್ಷೇತ್ರದ ಆಡಳಿತ ಸಮಿತಿ, ಪುನರ್ ನವೀಕರಣ-ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7 ರಿಂದ ಶಿಶಿರ ಬಾಲಸಭೆ ಕೋಟೆಕ್ಕಾರ್ ತಂಡದಿಂದ ಕಾರ್ಯಕ್ರಮ ವೈವಿಧ್ಯಗಳು, 8 ರಿಂದ ರಾಜರಾಜೇಶ್ವರಿ ಮಹಿಳಾ ಸಂಘ ಮುಂಡಪ್ಪಳ್ಳ ಇವರಿಂದ ನೃತ್ಯ ವೈವಿಧ್ಯಗಳು ನಡೆಯಿತು. ಬೆಳಿಗ್ಗೆ ವಿವಿಧೆಡೆಗಳಿಂದ ಹಸಿರುವಾಣಿ ಹೊರೆಕಾಣಿಕೆಗಳು ಆಗಮಿಸಿದ್ದವು.