ಕಾಸರಗೋಡು: ಮಾದಕದ್ರವ್ಯ ಬೇಟೆಗೆ ಇನ್ನು ಮುಂದೆ ಪೊಲೀಸರಿಗೆ ಕ್ರಿಸ್ಟಿನಾ ಎಂಬ ಹೆಸರಿನ ಪೊಲೀಸ್ ಶ್ವಾನ ನೆರವಾಗಲಿದೆ. ಕಾಸರಗೋಡು ಪೊಲೀಸ್ ಶ್ವಾನದಳಕ್ಕೆ ಸೇರ್ಪಡೆಗೊಂಡಿರುವ ಲ್ಯಾಬ್ರಡಾರ್ ತಳಿಯ 1ವರ್ಷ ಎರಡು ತಿಂಗಳ ಹರೆಯದ ಈ ನಾರ್ಕೋಟಿಕ್ ಸ್ನೀಫರ್ ಶ್ವಾನಕ್ಕೆ ತೃಶ್ಯೂರಿನ ಪೊಲೀಸ್ ಅಕಾಡಮಿಯಲ್ಲಿ ತರಬೇತಿ ನೀಡಲಾಗಿದೆ.
ಈ ಮೂಲಕ ಕಾಸರಗೋಡು ಜಿಲ್ಲಾ ಪೊಲೀಸ್ ಶ್ವಾನದಳದ ಸಂಕ್ಯೆ ಐದಕ್ಕೇರಿದೆ. ಪಂಜಾಬಿನ ಲುಧಿಯಾನದಿಂದ ಕೇರಳ ಪೊಲೀಸ್ ದಳಕ್ಕೆ ಖರೀದಿಸಿದ ಎಂಟು ಶ್ವಾನಗಳಲ್ಲಿ ಒಂದು ಇದಾಗಿದೆ. ವಾಹನಗಳಲ್ಲಿ ಮಾದಕದ್ರವ್ಯ ಸಾಗಿಸುವುದನ್ನು ಕ್ಷಣಾರ್ಧದಲ್ಲಿ ಪತ್ತೆಮಾಡುವ ವಿಶೇಷ ಪರಿಣತಿಹೊಂದಿದ ಶ್ವಾನ ಇದಾಗಿದ್ದು, ಮಾದಕದ್ರವಯ ಮಾಫಿಯಾಗಳಿಗೆ ಕ್ರಿಸ್ಟಿನಾ ಸಿಂಹಸ್ವಪ್ನವಾಗಲಿದ್ದಾಳೆ. ಟ್ರಾಕರ್, ನಾರ್ಕೋಟಿಕ್ ವಿಭಾಗದಲ್ಲಿ ತಲಾ ಒಂದು, ಎಕ್ಸ್‍ಪ್ಲೋಸಿವ್ ವಿಭಾಗದಲ್ಲಿ ಮೂರು ಶ್ವಾನಗಳು ಜಿಲ್ಲಾ ಪೊಲೀಸ್ ದಳದಲ್ಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಕ್ರಿಸ್ಟಿನಾಳನ್ನು ಪೊಲೀಸ್ ತಂಡಕ್ಕೆ ಸೇರ್ಪಡೆಗೊಳಿಸಿದರು.ಹೆಚ್ಚುವರಿ ಎಸ್‍ಪಿ ಪ್ರಶೋಬ್, ಡಿವೈಎಸ್‍ಪಿಗಳಾದ ಪಿ.ಹರೀಶ್ಚಂದ್ರ ನಾಯ್ಕ್, ಕೆ. ಸುನಿಲ್‍ಕುಮಾರ್, ತರಬೇತುದಾರರಾದ ಯು.ಸುಜಿತ್, ಪಿ.ವಿ ವಿನೀತ್ ಉಪಸ್ಥಿತರಿದ್ದರು.