ಕಾಸರಗೋಡು: ಟಿಪ್ಪರ್ ವಾಹನಗಳ ನಾಲ್ಕೂ ಪಾಶ್ರ್ವದಲ್ಲಿ ನೋಂದಾವಣಾ ಸಂಖ್ಯೆ ನಮೂದಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಆದೇಶಿಸಿದ್ದಾರೆ. ನೋಂದಾವಣಾ ನಂಬರ್‍ಗಳು ಅಸ್ಪಷ್ಟವಾಗಿರುವುದು, ನೋಂದಾವಣಾ ನಂಬರ್‍ಗಳಿಗೆ ಕರಿಆಯಿಲ್, ಟಾರ್ ಅಥವಾ ಕೆಸರು ಮೆತ್ತಿದ ರೀತಿಯಲ್ಲಿ, ನಂಬರ್ ಗೋಚರಿಸದ ರೀತಿ ಸಂಚಾರ ನಡೆಸುವ ಟಿಪ್ಪರ್‍ಗಳ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ಮನೋಜ್ ತಿಳಿಸಿದ್ದಾರೆ.
ಬೆಳಗ್ಗೆ 9ರಿಂದ 10 ಹಾಗೂ ಸಾಯಂಕಾಲ 4ರಿಂದ 5ರ ಮಧ್ಯೆ ಈ ಟಿಪ್ಪರ್ ಲಾರಿಗಳು ನಗರದಲ್ಲಿ ಸಂಚಾರ ನಡೆಸುತ್ತಿದ್ದು, ಇದು ಟಿಪ್ಪರ್ ಲಾರಿಗಳಿಗೆ ನೀಡಿರುವ ಪರವಾನಿಗೆಗೆ ವಿರುದ್ಧವಾಗಿದೆ. ಈ ಕಾಲಾವಧಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಂಚರಿಸಲು ಅನುಕೂಲವಾಗುವ ರೀತಿಯಲ್ಲಿ ಟಿಪ್ಪರ್ ಸಂಚಾರ ನಡೆಸದಿರುವಂತೆ ನೀಡಿರುವ ಈ ಆದೇಶ ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಫೆಬ್ರವರಿ 20ರಿಂದ ಈ ಬಗ್ಗೆ ವಿಶೇಷ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗುವುದು ಎಂದೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.