ಬದಿಯಡ್ಕ: ಅಂತರಾಷ್ಟ್ರೀಯ ಗುಣಮಟ್ಟದ ವಾಹನ ಚಾಲನ ತರಬೇತಿ ಹಾಗೂ ಪರೀಕ್ಷಾ ಘಟಕಗಳನ್ನು ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಆರಂಭಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಆದರೆ ಕೆಲವೆಡೆ ಅಗತ್ಯದ ಜಮೀನುಗಳ ಕೊರತೆಯಿಂದ ಇಂತಹ ಘಟಕಗಳನ್ನು ಆರಂಭಿಸುವಲ್ಲಿ ತೊಡಕುಗಳುಂಟಾಗುತ್ತಿದ್ದು, ಅಗತ್ಯದ ಕ್ರಮಗಳನ್ನು ಸರ್ಕಾರ ಕಂಡುಕೊಳ್ಳಲಿದೆ ಎಂದು ರಾಜ್ಯ ಸಾರಿಗೆ ಖಾತೆ ಸಚಿವ ಎ.ಕೆ.ಶಶೀಂದ್ರನ್ ಅವರು ತಿಳಿಸಿದರು.
ನೀರ್ಚಾಲು ಸಮೀಪದ ಬೇಳ ಕುಮಾರಮಂಗಲದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ವಾಹನ ತರಬೇತಿ ಕೇಂದ್ರ ಮತ್ತು ಪರವಾನಿಗೆ ಪರೀಕ್ಷಾ ಕೇಂದ್ರವನ್ನು ಶುಕ್ರವಾರ ಸಂಜೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಎಂಟನೆಯ ಹಾಗೂ ಜಿಲ್ಲೆಯ ಪ್ರಥಮ ಅತ್ಯಾಧುನಿಕ ಗುಣಮಟ್ಟದ ಇಂತಹ ಕೇಂದ್ರ ಆರಂಭಗೊಂಡಿರುವುದು ವ್ಯವಸ್ಥೆಗಳ ಸುಗಮ ನಿರ್ವಹಣೆಗೆ ರಹದಾರಿಯೊದಗಿಸಿದೆ. ಆಧುನಿಕ ತಂತ್ರಜ್ಞಾನ, ವಾಹನದ ಯಾಂತ್ರಿಕ ವ್ಯವರ್ಸತೆಗಳ ಸಮರ್ಥ ಬಳಕೆ ಮೊದಲಾದ ಹೊಸ ಪರಿಕಲ್ಪನೆಯಲ್ಲಿ ಇಂತಹ ಸುಸಜ್ಜಿತ ಕೇಂದ್ರ ಆರಂಭಿಸಿರುವುದರಿಂದ ವಾಹನಗಳ ಸುಲಲಿತ ಚಾಲನೆ ಮತ್ತು ಜನಜೀವನದ ಅಪಘಾತ ರಹಿತ ಬದುಕಿಗೆ ಹೊಸ ಅಧ್ಯಾಯ ತೆರೆದುಕೊಳ್ಳಲಿದೆ ಎಮದು ಸಚಿವರು ತಿಳಿಸಿದರು. ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ತರಬೇತಿ, ಪರವಾನಿಗೆಗಳಂತಹ ಆಧುನಿಕ ಶೈಲಿಯ ವ್ಯವರ್ಸತೆಗಳಿಂದ ಅತಿ ಶೀಘ್ರದಲ್ಲಿ ಬೃಹತ್ ವಾಹನಗಳ ಸಹಿತ ಎಲ್ಲಾ ರೀತಿಯ ವಾಹನ ಚಾಲನೆ-ತರಬೇತಿ-ಪರವಾನಿಗೆಗಳ ವಿತರಣೆಗಳನ್ನು ಜನರೊಂದಿಗೆ ನಿಕಟಗೊಳಿಸಲಿದೆ ಎಂದ ಸಚಿವರು ಮಲಪ್ಪುರಂ ಜಿಲ್ಲೆಯಲ್ಲಿ ಆರಂಭಿಸಿರುವ ವಿಶೇಷ ಕೇಂದ್ರದಲ್ಲಿ ವಿದೇಶ ರಾಜ್ಯಗಳಲ್ಲೂ ವಾಹನ ಚಾಲನೆಗಿರುವ ತರಬೇತಿ-ಪರವಾನಿಗೆಗಳಿಗೆ ಅವಕಾಶವೊದಗಿಸಿದೆ. ಮುಮದಿನ ದಿನಗಳಲ್ಲಿ ಇತರೆಡೆಗಳಿಗೂ ವಿಸ್ತರಿಸಲಾಗುವುದು ಎಂದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಂಸದ ರಾಜಮೋಹನ ಉಣ್ಣಿತ್ತಾನ್ ಹಾಗೂ ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಹಾಯಕ ಸಾರಿಗೆ ಕಮಿಷನರ್ ರಾಜೀವ್ ಪುತ್ತಲತ್ ವರದಿ ವಾಚಿಸಿದರು. ಸಾರಿಗೆ ಕಮಿಷನರ್ ಆರ್.ಶ್ರೀಲೇಖಾ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೋಲೀಸ್ ವರಿಷ್ಠ ಎಸ್.ಸಾಬು, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಜಿಲ್ಲಾ ಸಾರಿಗೆ ಅಧಿಕಾರಿ ಎಸ್.ಮನೋಜ್, ಬ್ಲಾ.ಪಂ.ಸದಸ್ಯ ಶಾಮಪ್ರಸಾದ್, ಗ್ರಾ.ಪಂ.ಸದಸ್ಯರಾದ ಎಸ್.ಸಬಾನ, ಜನಪ್ರತಿನಿಧಿಗಳು, ವಿವಿಧ ರಾಜಕೀಯ, ಸ್ಥಳೀಯ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.