ತಿರುವನಂತಪುರ: ಬಿಜೆಪಿ ಕೇರಳ ಘಟಕದ ನೂತನ ಅಧ್ಯಕ್ಷರಾಗಿ ಕೆ. ಸುರೇಂದ್ರನ್ ಶನಿವಾರ ಅಧಿಕಾರ ಸ್ವೀಕರಿಸಿದರು. ತಿರುವನಂತಪುರದ ಕುನ್ನಂಕುಲದಲ್ಲಿರುವ ಮಾರಾರ್‍ಜಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರ ಹರ್ಷೋದ್ಗಾರದ ಮಧ್ಯೆ ಅಧಿಕಾರ ವಹಿಸಿಕೊಂಡರು.
ಕೇಂದ್ರ ಸಚಿವ ವಿ.ಮುರಳೀಧರನ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಶಾಸಕ, ಓ.ರಾಜಗೋಪಾಲ್, ಪಿ.ಕೆ ಕೃಷ್ಣದಾಸ್, ಬಿಜೆಪಿ ಜಿಲ್ಲಾಧ್ಯಕ್ಷ ವಿ.ವಿ ರಾಜೇಶ್ ಮುಂತಾದವರು ಉಪಸ್ಥಿತರಿದ್ದರು. ಬೆಳಗ್ಗೆ ತಿರುವನಂತಪುರ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದ ಕೆ.ಸುರೇಂದ್ರನ್ ಅವರನ್ನು ಸಾವಿರಾರು ಮಂದಿ ಅಭಿಮಾನಿಗಳು ಬರಮಾಡಿಕೊಂಡರು. ನಂತರ ಅಲಂಕಾರಗೊಳಿಸಲಾದ ತೆರೆದ ವಾಹನದಲ್ಲಿ ಇವರನ್ನು ರೋಡ್‍ಶೋ ಮೂಲಕ ಎಂ.ಜಿ ರಸ್ತೆ, ಪಿ.ಎಂ.ಜಿಸರ್ಕಲ್ ಹಾದಿಯಾಗಿ ಸಮಾರಂಭ ನಡೆಯುವ ಸ್ಥಳಕ್ಕೆ ಕೊರೆದೊಯ್ಯಲಾಯಿತು. ರಸ್ತೆ ಎರಡೂಬದಿ ಕಾರ್ಯಕರ್ತರು ಜಯಘೋಷದೊಂದಿಗೆ ಸುರೇಂದ್ರನ್ ಅವರಿದ್ದ ವಾಹನಕ್ಕೆ ಪುಷ್ಪವೃಷ್ಟಿನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ ಅವರನ್ನು ಮಿಜೋರಂನ ರಾಜ್ಯಪಾಲರಾಗಿ ನಿಯೋಜಿಸಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ತೆರವಾಗಿತ್ತು. ಮೂರುವರೆ ತಿಂಗಳ ನಂತರ ರಾಜ್ಯಾಧ್ಯಕ್ಷರ ಆಯ್ಕೆ ನಡೆಸಲಾಗಿದ್ದು, ಕೆ.ಸುರೇಂದ್ರನ್ ಅವರ ನೇಮಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ.
ಬಂಡಾಯವೇ?
ಈ ಮಧ್ಯೆ ನಿನ್ನೆ ನಡೆದ ಪದ ಗ್ರಹಣ ಸಮಾರಂಭದಲ್ಲಿ ಕುಮ್ಮನಂ, ಶೋಭಾ ಸುರೇಂದ್ರನ್ ಭಾಗವಹಿಸದಿರುವುದು ಬಂಡಾಯದ ಊಹಾಪೋಪಗಳಿಗೆ ಕಾರಣವಾಗಿದೆ.