ನವದೆಹಲಿ: ಆಧಾರ್ ಆಧಾರಿತ ಆನ್‍ಲೈನ್ ಪ್ಯಾನ್ ಕಾರ್ಡ್‍ಗಳನ್ನು ತ್ವರಿತವಾಗಿ ನೀಡುವ ಸೌಲಭ್ಯವನ್ನು ಈ ತಿಂಗಳು ಸರ್ಕಾರ ರೂಪಿಸಲಿದೆ ಎಂದು ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
2020-21ರ ಬಜೆಟ್ ನಲ್ಲಿ ಒಂದು ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ. ಇದರ ಅಡಿಯಲ್ಲಿ ಪ್ಯಾನ್ ಕಾರ್ಡ್ ಹಂಚಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸರಾಗಗೊಳಿಸಲು ವಿವರವಾದ ಅರ್ಜಿ ನಮೂನೆಯನ್ನು ಭರ್ತಿ ಮಾಡದೆ ಆಧಾರ್ ಆಧಾರದ ಮೇಲೆ ಆನ್ ಲೈನ್ ನಲ್ಲಿ ಫ್ಯಾನ್ ಕಾರ್ಡ್ ಗಳನ್ನು ತ್ವರಿತಗತಿಯಲ್ಲಿ ಹಂಚಿಕೆ ಮಾಡಲಾಗುವುದು. ಈ ವ್ಯವಸ್ಥೆ ಸಿದ್ಧವಾಗಿದ್ದು, ಈ ತಿಂಗಳಲ್ಲಿ ಆರಂಭವಾಗಬಹುದು ಎಂದು ಅಜಯ್ ಭೂಷಣ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಸಂಪರ್ಕಿಸಿ ಆಧಾರ್ ನಂಬರ್ ಎಂಟರ್ ಮಾಡಿದ್ದರೆ ಈ ಸೌಲಭ್ಯದ ಬಗ್ಗೆ ತಿಳಿಯಲಿದೆ ಎಂದು ಅವರು ವಿವರಿಸಿದರು.ಒಟಿಪಿಯನ್ನು ಆಧಾರ್ ನೋಂದಾಯಿತ ಮೊಬೈಲ್ ನಂಬರ್ ಗೆ ಕಳುಹಿಸಲಾಗುತ್ತದೆ. ಆಧಾರ್ ವಿವರಗಳನ್ನು ಪರಿಶೀಲಿಸಲು ಒಟಿಪಿಯನ್ನು ಬಳಸಲಾಗುತ್ತದೆ. ನಂತರ ಪ್ಯಾನ್ ತ್ವರಿತವಾಗಿ ಹಂಚಿಕೆಯಾಗಲಿದೆ. ಇ- ಪ್ಯಾನ್ ಕಾರ್ಡ್ ನ್ನು ಯಾವುದೇ ವ್ಯಕ್ತಿಯೂ ಡೌನ್ ಲೌಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ತೆರಿಗೆ ಪಾವತಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಪ್ಯಾನ್ - ಆಧಾರ್ ಜೋಡಣೆಯನ್ನು ಸರ್ಕಾರ ಈಗಾಗಲೇ ಕಡ್ಡಾಯ ಮಾಡಿದೆ. ಸುಮಾರು 30.75 ಕೋಟಿ ಪ್ಯಾನ್ ಕಾರ್ಡ್ ಗಳು ಈಗಾಗಲೇ ಆಧಾರ್ ನೊಂದಿಗೆ ಜೋಡಣೆಯಾಗಿವೆ. ಆದಾಗ್ಯೂ, ಜನವರಿ 27ರಂತೆ ಇನ್ನೂ 17. 58 ಕೋಟಿ ಪ್ಯಾನ್ ಕಾರ್ಡ್ ಗಳು ಆಧಾರ್ ಜೊತೆಗೆ ಜೋಡಣೆ ಮಾಡಬೇಕಿದೆ. ಪ್ಯಾಡ್ - ಆಧಾರ್ ಜೋಡಣೆಗೆ ಮಾರ್ಚ್ 31, 2020 ಕಡೆ ದಿನವಾಗಿದೆ. ಹೊಸ ವ್ಯವಸ್ಥೆಯಿಂದ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಯಾವುದೇ ಕಿರುಕುಳವಾಗಲ್ಲ, ಇಡೀ ವ್ಯವಸ್ಥೆಯು ಸಂಪೂರ್ಣ ಸರಳವಾಗಿದೆ ಎಂದು ಅವರು ತಿಳಿಸಿದ್ದಾರೆ.