ಬದಿಯಡ್ಕ: ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಕುರಿತು ವಿಶೇಷ ಕಾರ್ಯಾಗಾರ ಶನಿವಾರ ನಡೆಯಿತು. ಆರೋಗ್ಯ ಇಲಾಖೆಯ ಅಧಿಕಾರಿ ದೇವಿಜಾಕ್ಷನ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ರೋಗಗಳ ಹರಡುವಿಕೆ ಮತ್ತು ಅದನ್ನು ನಿಯಂತ್ರಿಸಲು ನಾವು ಅನುಸರಿಸಬೇಕಾದ ಶಿಸ್ತುಬದ್ಧ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಕರೆನೀಡಿದರು. ಚೀನಾದೇಶವು ಕೊರೊನಾ ವೈರಸ್‍ನಿಂದ ಕಂಗೆಟ್ಟಿದ್ದು, ಭಾರತಕ್ಕೂ ಲಗ್ಗೆಯಿಟ್ಟಿರುವ ಈ ರೋಗ ಲಕ್ಷಣಗಳನ್ನು ವಿವರಿಸಿದರು. ಸಾರ್ವಜನಿಕ ಕ್ಷೇತ್ರಗಳಲ್ಲಿ ಉಗುಳುವುದು, ರಸ್ತೆಬದಿಯ ತಿಂಡಿಗಳನ್ನು ಉಪಯೋಗಿಸುವುದು ಎಂಬಿತ್ಯಾದಿಗಳಿಂದ ಗಾಳಿಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸಿದಂತಾಗುತ್ತದೆ ಎಂದರು.
ಇಲಾಖೆಯ ಅಧಿಕಾರಿ ವಿನೋದ್ ಮಾತನಾಡಿ, ನಮ್ಮ ಪಂಚೇಂದ್ರಿಯಗಳಾದ ಬಾಯಿ, ಕಿವಿ, ಮೂಗು, ನಾಲಿಗೆ ಹಾಗೂ ಚರ್ಮಗಳನ್ನು ಸದಾ ಶುಚಿಯಾಗಿರಿಸಿಕೊಳ್ಳಬೇಕು. ಹರಡುವ ರೋಗಗಳಾದ ಕೊರೊನಾ, ಡೆಂಗ್ಯೂ, ಚಿಕುನ್ ಗುನ್ಯಾ ಮೊದಲಾದ ರೋಗಾಣುಗಳು ನಮ್ಮ ಶರೀರವನ್ನು ಪ್ರವೇಶಿಸದಂತೆ ತಡೆಗಟ್ಟಬಹುದು. ತಂಪುಪಾನೀಯಗಳ ಬಳಕೆಗಳನ್ನು ಸೀಮಿತಗೊಳಿಸಬೇಕು. ಕೆಮ್ಮುವಾಗ, ಸೀನುವಾಗ ಕರವಸ್ತ್ರಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹಿತನುಡಿಗಳನ್ನಾಡಿದರು. ಆಶಾಕಾರ್ಯಕರ್ತೆ ಲೀಲಾವತಿ ಕನಕಪ್ಪಾಡಿ, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು. ಹತ್ತನೇ ತರಗತಿಯ ಸಾತ್ವಿಕ್ ಚುಳ್ಳಿಕ್ಕಾನ ಸ್ವಾಗತಿಸಿ, ಪ್ರತೀಕ ಕೆ. ವಂದಿಸಿದರು.