ಬದಿಯಡ್ಕ: ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವಿ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಮಧ್ಯಾಹ್ನ ವೈದಿಕ ಕಾರ್ಯಕ್ರಮಗಳು ಜರಗಿದವು.
ಬೆಳಗ್ಗೆ ಶ್ರೀ ದೇವರಿಗೆ ನವಕಾಭಿಷೇಕ, ಮಧ್ಯಾಹ್ನ ಬಲಿವಾಡು ಕೂಟದೊಂದಿಗೆ ಭೋಜನ ಪ್ರಸಾದ ನಡೆಯಿತು. ಸಂಜೆ ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಬೆಳಗ್ಗೆ ನಡೆದ ಜೀರ್ಣೋದ್ಧಾರ ಸಮಿತಿಯ ಸಭೆಯಲ್ಲಿ ಆಡಳಿತ ಮೊಕ್ತೇಸರ ಡಾ. ಕಿಶೋರ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕೋಶಾಧಿಕಾರಿ ಈಶ್ವರ ರಾವ್ ಮೈಲ್ತೊಟ್ಟಿ, ಯುವ ವಿಭಾಗದ ಅಧ್ಯಕ್ಷ ರಾಜೇಶ್ ಮಾಸ್ತರ್ ಅಗಲ್ಪಾಡಿ, ಮಾತೃಮಂಡಳಿಯ ಅಧ್ಯಕ್ಷೆ ಪ್ರತಿಭಾ ರಾಣಿ ಮಾತನಾಡಿದರು. ಕಿರಣ್ ಕುಣಿಕುಳ್ಳಾಯ, ಜಯರಾಜ್ ಕುಣಿಕುಳ್ಳಾಯ, ರಾಜೇಶ್ ಮಾಸ್ತರ್ ಉಬ್ರಂಗಳ, ಕೃಷ್ಣ ಮಣಿಯಾಣಿ ಉಬ್ರಂಗಳ, ಊರಪರವೂರ ಭಕ್ತಾದಿಗಳು, ಜೀರ್ಣೋದ್ಧಾರ ಸಮಿತಿ, ಮಾತೃಸಂಘ, ಯುವಸಮಿತಿ ಹಾಗೂ ಪ್ರಾದೇಶಿಕ ಯುವ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ ದಾನಿ ಬೆಂಗಳೂರು ವಿಶ್ವನಾಥ ಕುಣಿಕುಳ್ಳಾಯ ಅವರು ನೀಡಿದ ರೂಪಾಯಿ 25000ವನ್ನು ಅವರ ಪರವಾಗಿ ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಊರಪರವೂರ ಭಕ್ತಾದಿಗಳೂ ತಮ್ಮ ದೇಣಿಗೆಯನ್ನು ಸಮರ್ಪಿಸಿದರು. ರಾಜಶೇಖರ ಮಾಸ್ತರ್ ಪ್ರಾರ್ಥನೆಗೈದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಬು ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಕಾರ್ಯದರ್ಶಿ ಅಚ್ಚುತ ಮಾಸ್ತರ್ ಅಗಲ್ಪಾಡಿ ವಂದಿಸಿದರು.