ಮಂಜೇಶ್ವರ: ಆಮ್ ಆದ್ಮಿ ಪಕ್ಷದ ಗೆಲುವು ಕೇವಲ ದೆಹಲಿಗೆ ಸೀಮಿತವಲ್ಲ. ಪ್ರಸ್ತುತ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿರುವ ಕೇರ್ಜಿವಾಲ್ ನೇತೃತ್ವದ ಪಕ್ಷವು ದೇಶದಲ್ಲಿ ಬಲಾಢ್ಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಆಮ್ ಆದ್ಮಿ ಪಕ್ಷದ ಕಾಸರಗೋಡು ಜಿಲ್ಲಾ ಸಹ ಕಾರ್ಯದರ್ಶಿ ನಾಸಿರ್ ಕೋರಿಕ್ಕಾರ್ ಹೇಳಿದ್ದಾರೆ.
ದೆಹಲಿ ವಿಧಾಸಭಾ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೋರಿಕ್ಕಾರ್ ದೆಹಲಿಯಲ್ಲಿ ಆಪ್ ಪಕ್ಷದ ದೂರದೃಷ್ಠಿ, ಮೊಹಲ್ಲಾಗಳ ಮೂಲಕ ಜನ ಹಿತ ದೃಷ್ಠಿಯ ರಾಜಕೀಯ ಪ್ರಬುದ್ಧ ಮತ್ತು ಪ್ರಬಲವಾಗಿ ಬೆಳೆಯುತ್ತಿದ್ದು ಇತರೆಡೆಗೂ ವಿಸ್ತರಿಸಲ್ಪಡುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಮೂರನೇ ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜಯಿಸುತ್ತಿರುವ ಪಕ್ಷವು ತನ್ನ ಶಕ್ತಿಯನ್ನು ವೃದ್ಧಿಸಿದೆ. ಮೂಲಭೂತ ಅಭಿವೃದ್ಧಿ ದೃಷ್ಠಿಕೋನದ ಮೂಲಕ ಆಡಳಿತ ನಡೆಸಿದ ಆಮ್ ಆದ್ಮಿ ಪಕ್ಷ ಜನಸಾಮಾನ್ಯರ ಪಕ್ಷವಾಗಿ ಬೆಳೆದಿದೆ. ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷ ನೇತಾರರು, ಕಾರ್ಯಕರ್ತರ ಪರಿಶ್ರಮ, ಜನಪರ ಸೇವೆಯೇ ಪಕ್ಷದ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ. ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲೆಯಲ್ಲೂ ಪಕ್ಷವು ಬೆಳೆಯುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ರಾಜ್ಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಮೂಲಕ ತೃತೀಯ ಜನಪರ ರಾಜಕೀಯ ಶಕ್ತಿಯ ಸಾಧ್ಯತೆಗಳನ್ನು ಅಲ್ಲೆಗೆಳೆಯುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.