ಮಂಜೇಶ್ವರ: ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ಕ್ಷೇತ್ರ ಚಕ್ರತೀರ್ಥ ಪುನರ್ ನಿರ್ಮಾಣ ಪ್ರಯುಕ್ತ ಅದರ ಶಿಲಾನ್ಯಾಸ ಕಾರ್ಯಕ್ರಮ ಬ್ರಹ್ಮಶ್ರೀ ವರ್ಕಾಡಿ ದಿನೇಶ್ ಕೃಷ್ಣ ತಂತ್ರಿಯವರ ದಿವ್ಯ ಹಸ್ತದಲ್ಲಿ ನಡೆಯಿತು.
ಪುನರ್ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಡಾ.ಜಯಪಾಲ್ ಶೆಟ್ಟಿ ಮತ್ತು ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕುಂಜತ್ತೂರು ಹಾಗು ಭಕ್ತಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಚಕ್ರತೀರ್ಥವು ಶಾಸ್ತಾರ ಗುಡಿ, ನಾಗನಕಟ್ಟೆ, ರಕ್ತೇಶ್ವರಿ, ಗುಳಿಗ ಕಟ್ಟೆಯನ್ನೊಳಗೊಂಡ ಕ್ಷೇತ್ರ ಸಮುಚ್ಛಯವಾಗಿದ್ದು ಇಲ್ಲಿಂದ ಚಕ್ರತೀರ್ಥವೆಂಬ ತೀರ್ಥ ಉದ್ಧವಿಸಿ ಹರಿದು ಹೋಗುತ್ತದೆ. ಈ ತೀರ್ಥವು ಅತ್ಯಂತ ಪವಿತ್ರ ತೀರ್ಥವೆನಿಸಿದ್ದು, ಹಲವಾರು ರೋಗರುಜಿನಗಳಿಗೆ ದಿವ್ಯ ಔಷ„ ಎಂದು ಪ್ರತೀತಿಯಿದೆ. ನೂರಾರು ಕಾಲದ ಹಿಂದೆ ಋಷಿ ಮುನಿಗಳು ಈ ಪ್ರದೇಶದಲ್ಲಿ ತಪಸ್ಸನ್ನಾಚರಿಸುತ್ತಿದ್ದರು ಎಂಬ ಐತಿಹ್ಯವಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೇರ ಆಡಳಿತಕ್ಕೊಳಪಟ್ಟ ಈ ಕ್ಷೇತ್ರವು ಈಗ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು ಅದರ ಪುನರ್‍ನಿರ್ಮಾಣ ಕಾರ್ಯ ಪ್ರಸ್ತುತ ಆಶಾದಾಯಕವಾಗಿ ಸಾಗುತ್ತಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್‍ನಿರ್ಮಾಣ ಕಾಲದಲ್ಲೇ ಈ ಕ್ಷೇತ್ರವೂ ಪುನರ್ ನಿರ್ಮಾಣವಾಗಬೆಕಾಗಿತ್ತಾದರೂ ಹಲವು ಕಾರಣದಿಂದ ಆಗ ಬಾಕಿಯುಳಿದಿತ್ತು. ಈಗ ಈ ಕ್ಷೇತ್ರವನ್ನು ಸಂಪೂರ್ಣ ಶಿಲಾಮಯವಾಗಿ ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಗೊಳ್ಳಲಾಗಿದೆ. ಅದೇ ರೀತಿ ಹೂಳು ತುಂಬಿ ಹೋಗಿದ್ದ ಚಕ್ರತೀರ್ಥ ಕೆರೆಯನ್ನು ಸಂಪೂರ್ಣವಾಗಿ ಪುನರ್‍ನಿರ್ಮಿಸುವ ಕಾರ್ಯವೂ ನಡೆಯುತ್ತಿದೆ.
ಇದೇ ಬರುವ ಏಪ್ರಿಲ್ 1, 2 ಮತ್ತು 3 ರಂದು ಇದರ ಬ್ರಹ್ಮಕಲಶೋತ್ಸವದ ದಿನಾಂಕವೂ ನಿಗದಿಯಾಗಿದ್ದು ಸ್ಥಳೀಯ ಭಕ್ತರನ್ನೊಳಗೊಂಡ ಪುನರ್ ನಿರ್ಮಾಣ ಸಮಿತಿಯ ನೇತೃತ್ವದಲ್ಲಿ ಶ್ರಮದಾನ ಕಾರ್ಯವೂ ಭರದಿಂದ ಸಾಗುತ್ತಿದೆ. ಬ್ರಹ್ಮಕಲಶೋತ್ಸವದ ಪ್ರಯುಕ್ತ ನಾಗಮಂಡಲ ಸೇವೆಯೂ ಈ ಸಂದರ್ಭದಲ್ಲಿ ನಿಗದಿಯಾಗಿದ್ದು ಭಕ್ತರೆಲ್ಲರ ಸಂಪೂರ್ಣ ಸಹಕಾರ ಈ ಮಹತ್ಕಾರ್ಯದಲ್ಲಿ ಇರಬೇಕು ಎಂದು ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಮಾಡ ಅವರು ವಿನಂತಿಸಿಕೊಂಡಿದ್ದಾರೆ.