ಮುಳ್ಳೇರಿಯ: ಹಿಂದುಗಳು ಹಾಗೂ ಮುಸಲ್ಮಾನರು ಭಾರತದಲ್ಲಿ ಪರಸ್ಪರ ಸಹ ಉದರರೂ, ಸಹೋದರರೂ ಆಗಿ ಜೀವನವನ್ನು ಮುನ್ನಡೆಸುವುದಕ್ಕೆ ಭಾರತೀಯತೆಯೇ ಕಾರಣವಾಗಿದೆ. ಇಂತಹ ಐಕ್ಯತೆಯನ್ನು ಒಡೆಯುವ ಸಲುವಾಗಿ ವಿಪಕ್ಷಗಳು ಪೌರತ್ವ ತಿದ್ದುಪಡಿಯ ಹೆಸರಿನಲ್ಲಿ ದೇಶದಲ್ಲಿ ವಿಷದ ಬೀಜವನ್ನು ಬಿತ್ತುತ್ತಾ ಸತ್ಯವನ್ನು ಅಸತ್ಯವೆಂದು ಬೋಧಿಸಿ ನಾಡಿನ ಜನತೆಯ ನೆಮ್ಮದಿಯನ್ನು ಕೆಡಿಸುವಲ್ಲಿ ನಿರತವಾಗಿದೆ. ಇದ್ಯಾವುದಕ್ಕೂ ಜಗ್ಗದೆ ಭಾರತೀಯರು ಪೌರತ್ವರಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ನೇತಾರ, ಮಿಜೋರಾಂ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರ್ ಆರೋಪಿಸಿದರು.
ಬಿಜೆಪಿ ಕುಂಬ್ಡಾಜೆ ಹಾಗೂ ಚೆಂಗಳ ಪಂಚಾಯಿತಿ ಸಮಿತಿಗಳ ಜಂಟಿ ಆಶ್ರಯದಲ್ಲಿ ನಾರಂಪಾಡಿ ಪೇಟೆಯಲ್ಲಿ ಸೋಮವಾರ ಸಂಜೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ನಡೆದ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿರ್ಧಿಷ್ಟ, ನಿಖರವಾದ, ಧನಾತ್ಮಕವಲ್ಲದ ರಾಷ್ಟ್ರೀಯತೆಯಿಂದ ಇದೀಗ ವಿರೋಧಪಕ್ಷಗಳೆಲ್ಲವೂ ಪರಸ್ಪರ ಭಾಯಿ ಭಾಯಿಯಾಗಿ ಜನರನ್ನು ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡಿದೆ. ಮೋದಿ ಸರಕಾರವು ಧರ್ಮ ನೋಡಿ ಯಾರಿಗೂ ಮನೆ, ಗ್ಯಾಸ್ ಮೊದಲಾದ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ. ನಾಡಿನಲ್ಲಿ ಮತಸೌಹಾರ್ಧತೆಯನ್ನು ಕಾಯುವಲ್ಲಿ ಭಾರತೀಯ ಜನತಾ ಪಕ್ಷವು ನೀಡಿದಷ್ಟು ಆದ್ಯತೆಯನ್ನು ಯಾವ ರಾಜಕೀಯ ಪಕ್ಷಗಳೂ ನೀಡಿಲ್ಲ. ವೈವಿಧ್ಯತೆಗಳ ನಾಡಾದ ಭಾರತವೆಂಬ ಸುಂದರವಾದ ಹೂದೋಟವು ಒಂದೇ ರಾಷ್ಟ್ರ ಒಂದೇ ಜನರು ಎಂಬುದನ್ನು ಲೋಕ ರಾಜ್ಯಗಳಿಗೆ ತೋರ್ಪಡಿಸಬೇಕಿದೆ. 1955ರಿಂದಲೇ ಭಾರತದಲ್ಲಿ ಪೌರತ್ವ ನಿಯಮವಿದೆ. ಧರ್ಮದ ಹೆಸರಿನಲ್ಲಿ ಇತರ ದೇಶಗಳಲ್ಲಿ ಪೀಡಿತರಾಗಿ ಭಾರತದ ಆಶ್ರಯಕ್ಕಾಗಿ ಆಗಮಿಸುವವರಿಗೆ ಭಾರತೀಯ ಪೌರತ್ವನ್ನು ನೀಡಲಾಗುತ್ತಿದೆ. ಆದರೆ ಧರ್ಮದ ಹೆಸರಿನಲ್ಲಿ ಭಾರತದಲ್ಲಿ ಯಾರೂ ಪೀಡನೆಯನ್ನು ಅನುಭವಿಸಲು ಸಾಧ್ಯವಿಲ್ಲ. ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅದಕ್ಕೆ ಆಸ್ಪದವನ್ನು ನೀಡದು. ಐಕ್ಯತೆ ಏಕಾತ್ಮತೆಯ ಸಂದೇಶವನ್ನು ನಾವು ನೀಡಬೇಕಾಗಿದೆ. ವೈವಿಧ್ಯತೆಯಲ್ಲಿ ಏಕತೆಯ ರಾಷ್ಟ್ರವಾಗಿದೆ ಭಾರತ ಎಂದರು. ಪೌರತ್ವ ಲಭಿಸದ ಒಬ್ಬವ್ಯಕ್ತಿಯನ್ನು ಕೇರಳ ರಾಜ್ಯದಲ್ಲಿ ತೋರಿಸಿಕೊಡಲು ಪಿಣರಾಯಿ ವಿಜಯನ್ ಹಾಗೂ ರಮೇಶ್ ಚೆನ್ನಿತ್ತಲ ತಯಾರಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬಿಜೆಪಿ ರಾಜ್ಯಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಸುನಿಲ್ ಪಿ.ಆರ್. ಮಾತನಾಡಿದರು. ಸುಬ್ರಹ್ಮಣ್ಯ ಭಟ್ ತಲೇಕ, ಅವಿನಾಶ್ ರೈ, ಜನನಿ, ನ್ಯಾಯವಾದಿ ಸದಾನಂದ ರೈ, ಹರಿಕುಮಾರ್, ಶಿವಕೃಷ್ಣ ಭಟ್, ರಾಜೇಶ್ ಶೆಟ್ಟಿ ಕುಂಬ್ಡಾಜೆ ಹಾಗೂ ಪಕ್ಷದ ನೇತಾರರು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.