ಕಲಬುರಗಿ: ಕನ್ನಡ ನಾಡು, ನುಡಿ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಹೇಳಿದ್ದಾರೆ.
ನಿನ್ನೆ ಕಲಬುರಗಿಯ ವಿಶ್ವವಿದ್ಯಾಲಯದ ವಿಜಯ ಪ್ರಧಾನ ವೇದಿಕೆಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಸಮೃದ್ಧಿ, ನೆಲ ಜಲ ಅಸ್ಮಿತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ. ಖಾಸಗಿ ಶಾಲೆಗಳಲ್ಲಿ ಕನ್ನಡ ಉಳಿಸಲು, ಬೆಳೆಸಲು ಸರಕಾರ ಬದ್ಧವಾಗಿದೆ ಎಂದರು. ಕಲಬುರಗಿ ಸೂಫಿ ಸಂತ, ಶರಣರ ನಾಡಾಗಿದ್ದು, ಭಾವೈಕ್ಯತೆಯ ಪ್ರತೀಕವಾಗಿದೆ. ಜಿಲ್ಲೆ ತನ್ನದೇ ಆದ ಸಾಂಸ್ಕøತಿಕ, ಸಮಾಜಿಕವಾಗಿ ವೈಶಿಷ್ಟತೆಯಿಂದ ಕೂಡಿದೆ ಎಂದ ಅವರು, ಮಳಖೇಡದ ರಾಷ್ಟ್ರಕೂಟರು ಆಳಿದ ನಾಡು ಇದಾಗಿದ್ದು, ಮರಾಠಿ, ಉರ್ದು ಭಾಷೆ ಕಲ್ಯಾಣ ಕರ್ನಾಟಕದಲ್ಲಿ ದಟ್ಟವಾಗಿದೆ. ನೃಪತುಂಗನ ಮೊದಲ ಕೃತಿ ಕವಿರಾಜ ಮಾರ್ಗದ ರಚನೆಯಾಗಿದ್ದು ಈ ಭಾಗದ ಮಣ್ಣಿನಲ್ಲಿ. ಅಲ್ಲದೇ ವಿಜ್ಞಾನೇಶ್ವರನ ಮೂಲಾಕ್ಷರ ರಚನೆಯಾಗಿದ್ದು ಇಲ್ಲಿಯೇ. ಅಂತಹ ಕನ್ನಡ ಸಾಹಿತ್ಯ ನೀಡಿದ್ದು, ಈ ಭಾಗ ಎಂದು ಹಾಡಿ ಹೊಗಳಿದರು. ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಸ್ತಾವ ಸರಕಾರದ ಮುಂದಿಲ್ಲ. ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ನೀಡಲು ಸರಕಾರ ಬದ್ಧವಾಗಿದೆ. ಆದರೆ ಇದಕ್ಕೆ ಪೆÇೀಷಕರ ಸಹಕಾರವೂ ಅಗತ್ಯ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
ನಂಜುಂಡಪ್ಪ ವರದಿಯ ಅನುಸಾರ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ನೀಡುತ್ತಾ ಬರಲಾಗುತ್ತಿದೆ. ಹೈದರಾಬಾದ್ ಕರ್ನಾಟಕ ಎಂಬ ಹೆಸರನ್ನು ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡುವ ಮೂಲಕ ಈ ವಿಭಾಗದ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದ ಪರಿಣಾಮ ಈ ಭಾಗದ ವಿದ್ಯಾರ್ಥಿಗಳಿಗೆ ವಾರ್ಷಿಕ 700ಕ್ಕೂ ಅಧಿಕ ವೈದ್ಯಕೀಯ ಸೀಟುಗಳು, ಸಾವಿರಾರು ಎಂಜಿನಿಯರಿಂಗ್ ಸೀಟುಗಳು ದೊರೆಯುತ್ತಿವೆ ಎಂದು ಸಿಎಂ ಹೇಳಿದರು.