ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿರುವ ನಾಲ್ವರು ಆರೋಪಿಗಳಲ್ಲಿ ಒಬ್ಬರಾದ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಬುಧವಾರ ತಿರಸ್ಕರಿಸಿದ್ದಾರೆ.
ಸಹ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ ಮನವಿಯನ್ನು ರಾಷ್ಟ್ರಪತಿ ಕೋವಿಂದ್ ತಿರಸ್ಕರಿಸಿದ ಕೆಲವೇ ಗಂಟೆಗಳ ನಂತರ ಮರಣ ದಂಡನೆ ಶಿಕ್ಷೆಗೊಳಗಾಗಿರುವ ಆರೋಪಿಗಳು ಶನಿವಾರ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ನಿನ್ನೆ ದೆಹಲಿ ಹೈಕೋರ್ಟ್ ಅಪರಾಧಿಗಳಿಗೆ ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸಲು ಒಂದು ವಾರ ಕಾಲಾವಕಾಶ ನೀಡಿತು ಮತ್ತು ಅವರ ಮರಣದಂಡನೆಗಾಗಿ ವಿಚಾರಣೆಯನ್ನು ಪ್ರಾರಂಭಿಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತು. ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲ ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಬೇಕು ಎಂಬ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ರಾಷ್ಟ್ರಪತಿ ಅವರು ಈ ಆದೇಶ ನೀಡಿದ್ದಾರೆ.
ಅಪರಾಧಿಗಳಾದ ಮುಕೇಶ್ ಕುಮಾರ್? ಸಿಂಗ್, ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ, ಅಕ್ಷಯ್ ಕುಮಾರ್ ರನ್ನು ಫೆ.1ರಂದು ನೇಣಿಗೆ ಏರಿಸಬೇಕಿತ್ತು. ಆದರೆ ಈ ಮಧ್ಯೆ ಕೆಲವು ಕಾನೂನು ಪ್ರಕ್ರಿಯೆಗಳಿಂದಾಗಿ ದೆಹಲಿ ನ್ಯಾಯಾಲಯ ಅವರ ಮರಣದಂಡನೆಗೆ ತಡೆ ನೀಡಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು.