ಕುಂಬಳೆ: ಆರೋಗ್ಯ ಚಿಕಿತ್ಸಾ ಕ್ಷೇತ್ರದಲ್ಲಿ ತನ್ನದೇ ಕೊಡುಗೆಗಳ ಮೂಲಕ ಪ್ರಸಿದ್ದಿಯಾಗಿರುವ ಕುಂಬಳೆ ಸಹಕಾರಿ ಆಸ್ಪತ್ರೆ ಇದೀಗ ಸ್ಥಳೀಯ ಜನರಿಗೆ ಅಸಹಕಾರದ ಬದುಕಿಗೆ ಕಾರಣವಾಗುವ ಅಂಶಗಳಿಂದ ರೋಶಕ್ಕೆ ಕಾರಣವಾಗಿದೆ.
ಪೇಟೆಯಿಂದ ಅನತಿ ದೂರದಲ್ಲಿ ಕಾರ್ಯಾಚರಿಸುತ್ತಿದ್ದ ಸಹಕಾರಿ ಆಸ್ಪತ್ರೆಗೆ ಪೇಟೆಯ ಹೃದಯ ಭಾಗದಲ್ಲಿ ನೂತನ ಕಟ್ಟಡ ನಿರ್ಮಿಸಿ ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳಿಂದ ಉದ್ಘಾಟಿಸಲ್ಪಟ್ಟಿತ್ತು. ಆದರೆ ಆಸ್ಪತ್ರೆಯ ಮಲಿನ ಜಲ ನಿರ್ವಹಣೆಗೆ ಅಧಿಕೃತರು ವಹಿಸುತ್ತಿರುವ ಅನಾಸ್ಥೆಯ ಕಾರಣ ಇದೀಗ ಪರಿಸರ ಪ್ರದೇಶ ಅತಂತ್ರತೆಗೆ ತಳ್ಳಲ್ಪಟ್ಟಿದೆ.
ಪುಟಾಣಿಗಳ ಅಂಗನವಾಡಿಯೂ ಸೇರಿದಂತೆ ಹತ್ತಕ್ಕಿಂತಲೂ ಹೆಚ್ಚು ಕುಟುಂಬಗಳು ಆಸ್ಪತ್ರೆ ಪರಿಸರದಲ್ಲಿದೆ. ಇದೀಗ ಆಸ್ಪತ್ರೆಯ ಕೊಳಚೆ ನೀರು ಈ ಮನೆಗಳ ಬಾವಿಗೆ ಬಂದು ಸೇರುತ್ತಿರುವುದರಿಂದ ಬಳಕೆಗೆ ಅಯೋಗ್ಯವಾಗಿದೆ. ಜೊತೆಗೆ ದುರ್ವಾಸನೆಯುಕ್ತ ನೀರಿನಿಂದ ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ. ಇದರಿಂದ ಈ ಪರಿಸರದ ಹತ್ತಕ್ಕಿಂತಲೂ ಹೆಚ್ಚು ಮನೆಗಳು ಮತ್ತು ಅಂಗನವಾಡಿ ಕುಡಿಯುವ ಶುದ್ದಜಲ ಕೊರತೆ ಹಾಗೂ ಸಾಂಕ್ರಾಮಿಕ ರೊಗಭೀತಿಯಲಿದೆ.
ಸಮಸ್ಯೆಗೆ ಸಮರ್ಪಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯರು ಕ್ರಿಯಾ ಸಮಿತಿಗೆ ರೂಪು ನೀಡಿದ್ದಾರೆ. ಕ್ರಿಯಾ ಸಮಿತಿಯ ಸಂಚಾಲಕರಾಗಿ ಪ್ರೇಮ ಕಿಶೋರ್ ಕೆ., ಸಹಸಂಚಾಲಕರಾಗಿ ಪ್ರಮೋದ್ ಕುಮಾರ್ ಕೆ., ಕಿಶೋರ್ ಕೆ., ರಮೇಶ್ ಭಟ್ ಕೆ ಅವರನ್ನು ಆಯ್ಕೆಮಾಡಲಾಗಿದೆ.
ಈ ಬಗ್ಗೆ ಭಾನುವಾರ ನಡೆದ ತುರ್ತು ಸಭೆಯಲ್ಲಿ ಬ್ಲಾಕ್ ಪಂಚಾಯತಿ ಸದಸ್ಯ ಸತ್ಯಶಂಕರ ಭಟ್ ಎಚ್. ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆ ಅಧಿಕೃತರು ಮುಂದಿನ ಹತ್ತು ದಿನಗಳೊಳಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಸಾರ್ವಜನಿಕ ಸಹಕಾರದೊಂದಿಗೆ ಜನಪರ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿ.ರವೀಂದ್ರನ್, ಗ್ರಾ.ಪಂ.ಸದಸ್ಯ ರಮೇಶ್ ಭಟ್ ಕೆ ಉಪಸ್ಥಿತರಿದ್ದರು.