ಬದಿಯಡ್ಕ: ಇಲ್ಲಿನ ಕ್ರಿಯೇಟಿವ್ ಕಾಲೇಜಿನ ವಾರ್ಷಿಕೋತ್ಸವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಜರಗಿತು.
ಮಲಯಾಳ ಭಾಷಾ ತಜ್ಞ, ಪ್ರಾಧ್ಯಾಪಕ, ವಿವಿಧ ಕಲಾ ಪ್ರವೀಣ ಡಾ.ಸಿ.ಕೆ.ನಾರಾಯಣ ಪಣಿಕ್ಕರ್ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ತಮ್ಮ ಜೀವನ ಮಾರ್ಗವನ್ನು ಕಂಡುಕೊಳ್ಳಬೇಕು, ಇಂದಿನ ಸಾಮಾಜಿಕ ಜಾಲ ತಾಣಗಳಿಂದ ಯುವ ಮನಸ್ಸು ವಿಚಲಿತರಾಗದೆ ಕಲಿಕೆಗೆ ಹೆಚ್ಚಿನ ಗಮನ ನೀಡಬೇಕು ಮೊದಲಾದ ವಿಷಯದ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಸಿ.ಎಚ್.ಶಿವದಾಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಶಾಂ ಪ್ರಸಾದ್ ಮಾನ್ಯ, ಕಾಲೇಜಿನ ಆಡಳಿತ ಟ್ರಸ್ಟಿ ರಂಗ ಶರ್ಮಾ ಉಪ್ಪಂಗಳ, ಖ್ಯಾತ ವೈದ್ಯ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಮುಖ್ಯ ಅತಿಥಿಗಳಾಗಿದ್ದರು.
ಸಂಸ್ಥೆಯ ವತಿಯಿಂದ ಡಾ.ನಾರಾಯಣ ಪಣಿಕ್ಕರ್ ಅವರನ್ನು ಅಭಿನಂದಿಸಲಾಯಿತು. ಕಾಲೇಜಿನ ಪ್ರಾಧ್ಯಾಪಕರು, ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಸತೀಶ್ ಸ್ವಾಗತಿಸಿ, ಕಾರ್ಯದರ್ಶಿ ಮೋಹಿತ್ ಕುಮಾರ್ ವರದಿ ವಾಚಿಸಿದರು. ಮಧುಶ್ರೀ ಪ್ರಾರ್ಥನೆ ಹಾಡಿದರು. ಪ್ರಾಧ್ಯಾಪಿಕೆ ಶ್ರೀಜ ಕಾರ್ಯಕ್ರಮ ನಿರೂಪಿಸಿದರು.