ಮುಳ್ಳೇರಿಯ: ಪರಿಸರಕ್ಕೆ ಮಾರಕವಗಬಲ್ಲ ಪ್ಲಾಸ್ಟಿಕ್ಕನ್ನು ಪ್ರಧಾನವಾಹಿನಿಯ ಹೊಸ್ತಿಲ ಹೊರಗೆ ಇರಿಸಲು ಕಾರಡ್ಕ ಬ್ಲಾಕ್ ಪಂಚಾಯತಿ ಪಣತೊಟ್ಟಿದ್ದು, ಈ ಸಂಬಂಧ ನಡೆಯುತ್ತಿರುವ ಚಟುವಟಿಕೆಗಳು ಮುಂದುವರಿಯುತ್ತಿವೆ.
"ಗ್ರೀನ್ ಕಾರಡ್ಕ" ಪ್ರಚಾರ ಚಟುವಟಿಕೆಗಳ ಪರಿಣಾಮ ಕಾರಡ್ಕ ಬ್ಲಾಕ್ ಪಂಚಾಯತಿ ಕಚೇರಿ ಮತ್ತು ಇತರ ಸಂಸ್ಥೆಗಳು ಪೂರ್ಣ ರೂಪದಲ್ಲಿ ಹಸುರು ಸಂಹಿತೆಯ ವ್ಯಾಪ್ತಿಯಲ್ಲಿವೆ. ಬ್ಲಾಕ್ ಪಂಚಾಯತಿಯ ಎಲ್ಲ ಸಮಾರಂಭಗಳಲ್ಲೂ ಆಹಾರ ವಿತರಣೆ ನಡೆಸುವ ವೇಳೆ ಸ್ಟೀಲ್ ತಟ್ಟೆ, ಲೋಟ ಸಹಿತ ಪ್ರಕೃತಿಗೆ ಮಾರಕವಲ್ಲದ, ತೊಳೆದು ಮರಳಿ ಬಳಸಬಹುದಾದ ಪಾತ್ರೆಗಳನ್ನು ಉಪಯೋಗಿಸಲಾಗುತ್ತಿದೆ. ಇದಕ್ಕಾಗಿಯೇ ಬ್ಲಾಕ್ ಪಂಚಾಯತಿ ಪಾತ್ರೆ ಸಲಕರಣೆಗಳನ್ನು ಖರೀದಿಸಿದೆ. ಬ್ಲಾಕ್ ವ್ಯಾಪ್ತಿಯ ಗ್ರಾಮಪಂಚಾಯತಿಗಳಲ್ಲಿ ಪ್ಲಾಸ್ಟಿಕ್, ಕಾಗದದ ತಟ್ಟೆ, ಲೋಟ ಇತ್ಯಾದಿ ಬಳಸಕೂಡದು ಎಂಬ ಕಡ್ಡಾಯ ಆದೇಶ ಹೊರಡಿಸಲಾಗಿದೆ.
ಶುಚಿತ್ವ ಮಿಷನ್ ನೇತೃತ್ವದಲ್ಲಿ "ಕಲೆಕ್ಟರ್ಸ್ ಎಟ್ ಸ್ಕೂಲ್" ಎಂಬ ಹೆಸರಿನಲ್ಲಿ ಜಿಲ್ಲೆಯ ಶಾಲೆಗಳನ್ನು ಕೇಂದ್ರೀಕರಿಸಿ ನಡೆಸಲಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಕಾರ್ಯಕ್ರಮ ಅಂಗವಾಗಿ ಕಾರಡ್ಕ ಬ್ಲಾಕ್ ನ ಮೂರು ಶಾಲೆಗಳಿಗೆ ತ್ಯಾಜ್ಯ ಸಂಗ್ರಹ ಪೆಟ್ಟಿಗೆಗಳನ್ನು ವಿತರಿಸಲಾಗಿದೆ. ಕಾರಡ್ಕ, ಇರಿಯಣ್ಣಿ, ಕುತ್ತಿಕೋಲು ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಈ ಪಟ್ಟೆಗೆ ಇರಿಸಲಾಗಿದೆ. ವಿದ್ಯಾರ್ಥಿ ಪೆÇಲೀಸ್ ಪಡೆ, ಎನ್.ಎಸ್.ಎಸ್. ಘಟಕ ನೇತೃತ್ವದಲ್ಲಿ ವಾರಕ್ಕೊಮ್ಮೆ ಶಾಲೆಯ ಆವರಣ ಶುಚಿಗೊಳಿಸಿ ತ್ಯಾಜ್ಯಗಳನ್ನು ಈ ಪೆಟ್ಟಿಗೆಯಲ್ಲಿ ಸಂಗ್ರಹಿಸುತ್ತಾರೆ. ಕೊಳತ್ತೂರು, ಕುಂಡಂಕುಳಿ, ಮುನ್ನಾಡ್ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಮತ್ತು ಮುನ್ನಾಡ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಪೆಟ್ಟಿಗೆಗಳನ್ನೂ ನೀಡಲಾಗಿದೆ. ಹರಿತಕ್ರಿಯಾ ಸೇನೆಯ ಸದಸ್ಯರು ಈ ಸಂಗ್ರಹವನ್ನು ಪಂಚಾಯತಿ ನೇತೃತ್ವದಲ್ಲಿ ನೆಲ್ಲಿಯಡ್ಕದಲ್ಲಿರುವ ಪ್ಲಾಸ್ಟಿಕ್ ಟ್ರಂಚಿಂಗ್ ತ್ಯಾಜ್ಯ ಪರಿಷ್ಕರಣೆ ಘಟಕಕ್ಕೆ ಒಯ್ಯುವರು. ಗ್ರಾಮ ಪಂಚಾಯತಿ ನೇತೃತ್ವದ ಆರ್.ಆರ್.ಎಫ್. ಕೇಂದ್ರದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಬ್ಲಾಕ್ ಪಂಚಾಯತಿಯನ್ನು ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸುವ ಚಟುವಟಿಕೆಗಳ ಅಂಗವಾಗಿ ಮಹಿಳಾ ಸ್ವ ಸಹಾಯ ಸಂಘಗಳ ನೇತೃತ್ವದಲ್ಲಿ ಬಟ್ಟೆ ಚೀಲ ನಿರ್ಮಾಣಕ್ಕೆ ಸಬ್ಸಿಡಿ ನೀಡುವ ಯೋಜನೆಯನ್ನು 2020-21ನೇ ವಾರ್ಷಿಕ ಯೋಜನೆಯಲ್ಲಿ ಅಳವಡಿಸಲಾಗಿದೆ. ಜೊತೆಗೆ ಬ್ಲಾಕ್ ಪಂಚಾಯತಿ ಘಟಕ ಸಂಸ್ಥೆಗಳು ಚಟುವಟಿಕೆ ನಡೆಸುತ್ತಿರುವ ಕಟ್ಟಡದಲ್ಲಿ ನೌಕರಿಖಾತರಿ ಯೋಜನೆಯಲ್ಲಿ ಅಳವಡಿಸಿ ಜೈವಿಕ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸುವ ಸಂಬಂಧ ಕ್ರಮಗಳು ಮುಂದುವರಿಯುತ್ತಿವೆ.