ಕಾಸರಗೋಡು: ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಬಿಸಿಲಿನ ಆಘಾತದಂತಹ ಅಸೌಖ್ಯ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಈ ಬಗ್ಗೆ ಜಾಗ್ರತೆ ಪಾಲಿಸುವಂತೆ ಜಿಲ್ಲಾ ಸಹಾಯಯಕ ವೆದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಅತಿಯಾದ ಇಬ್ಬನಿಯಾಗುತ್ತಿರುವುದೂ ಜನರಲ್ಲಿ ಸಮಸ್ಯೆಗೆ ಕಾರಣವಾಗುತ್ತಿದೆ. ಬೆಳಗ್ಗಿನ ಜಾವದ ನಡಿಗೆಯಲ್ಲಿ ತೊಡಗಿರುವವರು, ದ್ವಿಚಕ್ರ ಸವಾರರಿಗೆ ಬೆಳಗ್ಗಿನ ಇಬ್ಬನಿ ಕೆಲವೊಂದು ಅಸೌಖ್ಯ ತಂದೊಡ್ಡುತ್ತಿದೆ. ಶೀತ, ತಲೆನೋವು, ಗಂಟಲು ನೋವಿನ ಅನುಭವವೂ ಉಂಟಾಗುತ್ತಿದೆ. ಬೆಳಗ್ಗಿನ ಇಬ್ಬನಿಗೆ ಮೈಯೊಡ್ಡಿ ನಂತರ ಅತಿಯಾದ ತಾಪಮಾನದಿಂದ ಕೂಡಿದ ಬಿಸಿಲೂ ಮೈಗೆ ತಾಗುವುದರಿಂದ ಜನರ ಆರೋಗ್ಯದಲ್ಲಿ ಏರುಪೇರುಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಅತಿಯಾದ ತಾಪಮಾನದಿಂದ ದೇಹದಲ್ಲಿ ನೀರಿನ ಅಂಶ ಕಡಿಮೆ ತಲೆದೋರಲಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುವಂತೆ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿರ್ಮಾಣ ಕಾಮಗಾರಿಗಳಲ್ಲಿ ಕೆಂಪುಕಲ್ಲು, ಕಗ್ಗಲ್ಲು ಕೋರೆಗಳಲ್ಲಿ ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡುವವರು ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ಬಿಸಿಲಿನಲ್ಲಿ ಸಂಚರಿಸುವ ಸಂದರ್ಭ ಅಗತ್ಯ ಮುಂಜಾಗ್ರತೆ ಕೈಗೊಳ್ಳುವಂತೆಯೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೃಷಿ ಕಾರ್ಮಿಕರು ಹಾಗು ಹೊರಾಂಗಣದಲ್ಲಿ ಕೆಲಸ ಮಾಡುವವರು ಅಗತ್ಯ ವಿಶ್ರಾಂತಿ ಪಡೆದುಕೊಳ್ಳುವಂತೆಯೂ ಸೂಚಿಸಿದೆ.