HEALTH TIPS

ಪಾರ್ತಿಸುಬ್ಬನ ಬದುಕು-ಬರಹ: ದ್ವಿದಿನ ವಿಚಾರ ಸಂಕಿರಣ ಸಂಪನ್ನ-ಹೆಚ್ಚು ಬಳಕೆಗೆ ಬಾರದ ಪಾರ್ತಿಸುಬ್ಬನ ಪ್ರಸಂಗಗಳ ಪ್ರಸ್ತುತಿ ಆಗಬೇಕು-ಪ್ರೊ.ಎಂ.ಎಲ್ ಸಾಮಗರಿಂದ ಸಮಾರೋಪ ಭಾಷಣ

 
     ಕಾಸರಗೋಡು: ಶ್ರೀಮಂತವಾದ ಯಕ್ಷಗಾನ ಪರಂಪರೆ, ಪ್ರಸಂಗ ಸಾಹಿತ್ಯಗಳನ್ನು ಕನ್ನಡ ಸಾಹಿತ್ಯದ ಅಂಗವಾಗಿ ಪರಿಗಣಿಸುತ್ತಿಲ್ಲ ಎಂಬ ಅನೇಕ ವರ್ಷಗಳ ತೊಡಕು ಇಂದಿಗೂ ಬಗಹರಿದಿರುವುದು ಗಂಭೀರ ಸ್ವರೂಪದ್ದಾಗಿದೆ. ಯಕ್ಷಗಾನ ಸಾಹಿತ್ಯದ ಸಾಹಿತ್ತಿಕ ಮೌಲ್ಯಗಳನ್ನು ಪರಿಚಯಿಸುವ ವ್ಯವಸ್ಥೆಗಳು ಹೇಗೆ ಎಂಬ ಬಗ್ಗೆ ಚಿಂತನೆಗಳಾಗಬೇಕು. ಯಕ್ಷ ಪಿತಾಮಹ ಪಾರ್ತಿಸುಬ್ಬನ ಜನಪದ ಜೀವನದ ನಾಡಿಹಿಡಿದು ಬರೆದಿರುವ ಪ್ರಸಂಗಗಳನ್ನು ಈ ನಿಟ್ಟಿನಲ್ಲಿ ಆಳಕ್ಕಿಳಿದು ಅಧ್ಯಯನ ನಡೆಸಿ ಪ್ರತಿಬಿಂಬಿಸುವ ಯತ್ನಗಳಾಗಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ, ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
      ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ, ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಮತ್ತು ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಈ ಸಂಸ್ಥೆಗಳ ಸಹಯೋಗದೊಂದಿಗೆ ಕಾಸರಗೋಡಿನ ಚಾಲಾ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಪಾರ್ತಿಸುಬ್ಬ ಬದುಕು ಬರಹ ವಿಚಾರಗೋಷ್ಠಿಯ ಶುಕ್ರವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಗೈದು ಅವರು ಮಾತನಾಡಿದರು.
      ಪಾರ್ತಿಸುಬ್ಬನ ಬದುಕು ಮತ್ತು ಬರಹಗಳ ಬಗ್ಗೆ ಚರ್ಚಿಸುವ ಈ ಹೊತ್ತಲ್ಲಿ ಬದುಕಿಗಿಂತ ಬರಹಗಳು ಹೆಚ್ಚು ಅಧ್ಯಯನ ಯೋಗ್ಯವಾಗಿರುತ್ತದೆ ಎಂಬ ಪರಿಪಾಠ ಬೆಳೆದುಬಂದಿದೆ. ಆದರೆ ಪ್ರಸಂಗ ಬರಹಗಳ ಜೊತೆಗೆ ಕವಿಯ ಬಗೆಗೂ ಉಲ್ಲೇಖಿಸುವ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಇತರ ರಂಗಭೂಮಿಯಂತೆ ಆರಂಭದಲ್ಲಿ ಕವಿಯ ಬಗೆಗೂ ಹೆಸರನ್ನು ಉಲ್ಲೇಖಿಸುವ ಅಗತ್ಯ ಇದೆ ಎಂದು ಅವರು ತಿಳಿಸಿದರು. ಕವಿಗೆ ನ್ಯಾಯದೊರಕಿಸುವಲ್ಲಿ ಯಕ್ಷಗಾನವನ್ನು ಹೇಗೆ ರೂಪಿಸಬಹುದು ಎಂಬುದನ್ನು ಸಾಧ್ಯವಿದ್ದಷ್ಟು ಜವಾಬ್ದಾರಿಯುತರಾಗಿ ರೂಪಿಸಬೇಕು ಎಂದ ಅವರು ಪಾರ್ತಿಸುಬ್ಬನ ಬದುಕು ಬರಹಗಳ ನಿಟ್ಟಿನಲ್ಲಿ ಈವರೆಗೆ ಆದ ಚರ್ಚೆ, ಬರಹಗಳ ಏಕೀರಣ ಆಗಬೇಕು ಎಂದರು. ಹೃದಯ ತಟ್ಟುವ, ನೇರ ವಾಕ್ಯಗಳ ಮೂಲಕ ಭಾಷೆಯನ್ನು ಕಟ್ಟಿಕೊಡುವ ಪಾರ್ತಿಸುಬ್ಬನ ಪ್ರಸಂಗ ಅತ್ಯಪೂರ್ವವಾದುದು. ಹೆಚ್ಚು ಬಳಕೆಗೆ ಬಾರದ ಪಾರ್ತಿಸುಬ್ಬನ ಇತರ ಪ್ರಸಂಗಗಳ ಪ್ರದರ್ಶನಗಳು ಹೆಚ್ಚೆಚ್ಚು ಆಗಬೇಕು. ಈ ಮೂಲಕ ಹೊಸ ಹೊಳಹುಗಳಿಗೆ ದಾರಿಯೊದಗುವುದು ಎಂದು ಈ ಸಂದರ್ಭ ತಿಳಿಸಿದರು.
    ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟಾರ್ ಎಸ್.ಎಚ್.ಶಿವರುದ್ರಪ್ಪ, ಯಕ್ಷಗಾನ ಅರ್ಥಧಾರಿ, ಸಾಹಿತಿ ಡಾ.ರಮಾನಂದ ಬನಾರಿ, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತಾ ಎಸ್., ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಕಾರ್ಯದರ್ಶಿ ಸಂಕಬೈಲು ಸತೀಶ ಅಡಪ, ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಉಪಸ್ಥಿತರಿದ್ದು ಮಾತನಾಡಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ವಂದಿಸಿದರು. ಸುಜಾತಾ ಎನ್. ಕಾರ್ಯಕ್ರಮ ನಿರೂಪಿಸಿದರು.
   ಬೆಳಿಗ್ಗೆ ಹಿರಿಯ ಯಕ್ಷಗಾನ ವಿದ್ವಾಂಸ, ಅಂಕಣಕಾರ ಡಾ.ಚಂದ್ರಶೇಖರ ದಾಮ್ಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಡಾ.ಆನಂದರಾಮ ಉಪಾಧ್ಯ ಅವರು ಪಾರ್ತಿಸುಬ್ಬನ ಕೃತಿ ಪರಿಚಯದ ಬಗ್ಗೆ ಮತ್ತು ಶ್ರೀಧರ ಡಿ.ಎಸ್.ಅವರು ಪಾರ್ತಿಸುಬ್ಬನ ಮಟ್ಟುಗಳ ಬಗ್ಗೆ ಉಪನ್ಯಾಸ ನೀಡಿದರು. ಜೊತೆಗೆ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಬಲಿಪ ಶೀವಶಂಕರ ಭಟ್ ಅವರಿಂದ ಪಾರ್ತಿಸುಬ್ಬನ ಪ್ರಸಂಗಗಳ ದಾಖಲೀಕರಣ ಪ್ರಾತ್ಯಕ್ಷಿಕೆಗಳ ಪ್ರಸ್ತುತಿ ನಡೆಯಿತು. ಲವಕುಮಾರ ಐಲ(ಮೃದಂಗ) ಹಾಗೂ ಮುರಾರಿ ಕಡಂಬಳಿತ್ತಾಯ(ಚೆಂಡೆ)ಯಲ್ಲಿ ಸಹಕರಿಸಿದರು. ಬಳಿಕ ಹಿರಿಯ ವಿದ್ವಾಂಸ ಡಾ.ರಾಘವ ನಂಬಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಪಾರ್ತಿಸುಬ್ಬನ ರಾಮಾಯಣ ಪ್ರಸಂಗಗಳು ವಿಷಯದ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಉಪನ್ಯಾಸ ನೀಡಿದರು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries