ತಿರುವನಂತಪುರ: ಬಿಜೆಪಿ ಕೇರಳ ರಾಜ್ಯ ಸಮಿತಿ ನೂತನ ಅಧ್ಯಕ್ಷರಾಗಿ ಕೆ. ಸುರೇಂದ್ರನ್ ಅವರನ್ನು ಆಯ್ಕೆಮಾಡಲಾಗಿದೆ. ರಾಷ್ಟ್ರೀಯ ಸಮಿತಿ ಅಧ್ಯಕ್ಷ ಜೆ.ಪಿ ನಡ್ಡಾ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಪಿ.ಎಸ್ ಶ್ರೀಧರನ್ ಪಿಳ್ಳೆ ಅವರನ್ನು ಝಾರ್ಖಂಡ್ ರಾಜ್ಯಪಾಲರನ್ನಾಗಿ ನೇಮಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಕೆಲವು ತಿಂಗಳ ನಂತರ ಈ ಆಯ್ಕೆ ನಡೆಸಲಾಗಿದೆ.
ಬಿಜೆಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುರೇಂದ್ರನ್ ಅವರು ಹೋರಾಟದ ಮೂಲಕ ಕೇರಳದಲ್ಲಿ ಪಕ್ಷವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಶಾಲಾ ಜೀವನದಲ್ಲಿ ಎಬಿವಿಪಿ ಮೂಲಕ ತಮ್ಮ ಹೋರಾಟದ ಬದುಕನ್ನು ಆರಂಭಿಸಿದ್ದರು. ಕೋಯಿಕ್ಕೋಡಿನ ಕುಳಿಯೇರಿ ಕುನ್ನುಮ್ಮಲ್ ವೀಟಿಲ್ ನಿವಾಸಿ ಕುಞÂರಾಮನ್-ಕಲ್ಯಾಣಿ ದಂಪತಿ ಪುತ್ರರಾದ ಕೆ. ಸುರೇಂದ್ರನ್ ಗುರುವಾಯೂರಪ್ಪ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಯುವಮೋರ್ಚಾ ರಾಜ್ಯಾಧ್ಯಕ್ಷರಾಗಿ ಕಾಸರಗೋಡಿನ ಮಂಜೇಶ್ವರದಿಂದ ತೊಡಗಿ ತಿರುವನಂತಪುರ ವರೆಗೂ ಹೋರಾಟಗಳಿಗೆ ನೇತೃತ್ವ ನೀಡಿದ್ದರು.
ಶಬರಿಮಲೆಗೆ ಯುವತಿಯರ ಪ್ರವೇಶ ಹಿನ್ನೆಲೆಯಲ್ಲಿ ನಡೆದ ಹೋರಾಟದಲ್ಲಿ ಸುರೇಂದ್ರನ್ ಪ್ರಮುಖ ಪಾತ್ರ ವಹಿಸಿದ್ದರು. ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಹಾಗೂ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 2016ರಲ್ಲಿ ನಡೆದ ಚುನಾವಣೆಯಲ್ಲಿ ಐಕ್ಯರಂಗದ ಪಿ.ಬಿ ಅಬ್ದುಲ್ ರಜಾಕ್ ಅವರ ವಿರುದ್ಧ ಕೇವಲ 89ಮತಗಳ ಅಂತರದಿಂದ ಪರಾಭವಗೊಂಡಿದ್ದರು. ವ್ಯಾಪಕ ನಕಲಿ ಮತದಾನವಾಗಿರುವ ಬಗ್ಗೆ ಕೆ. ಸುರೇಂದ್ರನ್ ಹೈಕೋರ್ಟಿಗೆ ದೂರು ಸಲ್ಲಿಸಿದ್ದರು. ನಂತರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಅವರ ನಿಧನದ ಹಿನ್ನೆಲೆಯಲ್ಲಿ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವ್ಯಾಜ್ಯ ಹಿಂತೆಗೆದುಕೊಂಡಿದ್ದರು.
ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪತ್ತನಂತಿಟ್ಟ ಕ್ಷೇತ್ರದಿಂದ ಸ್ಪರ್ಧಿಸಿ ಮೂರು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಅನಂತರ ನಡೆದ ಕೋನ್ನಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಗರಿಷ್ಠ ಸಾಧನೆ ತೋರಿಸಿದ್ದರು. ಕಾಸರಗೋಡಿನಲ್ಲಿ ಕೆಲವು ವರ್ಷ ಕಾಲ ವಾಸ್ತವ್ಯ ಹೂಡಿದ್ದ ಇವರು ನಿರರ್ಗಳವಾಗಿ ಕನ್ನಡ ಮಾತನಾಡಬಲ್ಲವರಾಗಿದ್ದಾರೆ.
ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಸೆಪ್ಟಂಬರ್ ತಿಂಗಳಲ್ಲಿ ಹಾಗೂ 2021ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕೆ. ಸುರೇಂದ್ರನ್ ಅವರ ಪಾಲಿಗೆ ನಿರ್ಣಾಯಕವಾಗಲಿದೆ.
ಎಲ್ಲ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜತೆಯಾಗಿ ಕೆಲಸ ಮಾಡುವ ಮೂಲಕ ಕೇರಳದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೆ. ಸುರೇಂದ್ರನ್ ತಿಳಿಸಿದ್ದಾರೆ. ಸುರೇಂದ್ರನ್ ಅವರ ಆಯ್ಕೆ ಯುವಜನತೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. 'ದೇಶಕ್ಕೆ ನರೇಂದ್ರ-ಕೇರಳಕ್ಕೆ ಸುರೇಂದ್ರ'ಎಂಬ ಘೋಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪತ್ನಿ ಶೀಬಾ, ಪುತ್ರ ಬಿ.ಟೆಕ್ ವಿದ್ಯಾರ್ಥಿ ಹರಿಕೃಷ್ಣನ್ ಹಾಗೂ ಪ್ಲಸ್ ಟು ವಿದ್ಯಾರ್ಥಿನಿಯಾಗಿುವ ಗಾಯತ್ರಿ ಅವರೊಂದಿಗೆ ಕೋಯಿಕ್ಕೋಡಿನಲ್ಲಿ ವಾಸ್ತವ್ಯ ಹೂಡಿದ್ದಾರೆ.