ಕಾಸರಗೋಡು: ವಾಸ್ತವ್ಯಕ್ಕಾಗಿ ಸ್ವಂತ ಭೂಮಿ ಎಂಬ ಕನಸುಹೊತ್ತ ಜಿಲ್ಲೆಯ ಆದಿವಾಸಿ ಕುಟುಂಬಗಳಿಗೆ ಭೂಮಿ ನೀಡುವ ಭರವಸೆಯನ್ನು ಕಳೆದ ಆರು ವರ್ಷಗಳಿಂದ ಈಡೇರಿಸದಿರುವುದನ್ನು ಪ್ರತಿಭಟಿಸಿ ವಿವಿಧ ಆದಿವಾಸಿ ಸಮುದಾಯ ಸಂಘಟನೆಗಳ ಸಹಕಾರದೊಂದಿಗೆ ಬುಧವಾರ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ನಿರಾಹಾರ ಸತ್ಯಾಗ್ರಹ ನಡೆಸಲಾಯಿತು.
ಪರಿಶಿಷ್ಟ ಜಾತಿ-ಪ.ವರ್ಗ ಅಭಿವೃದ್ಧಿ ಇಲಾಖೆ ನಿರ್ಲಕ್ಷ್ಯ ಧೋರಣೆಯಿಂದ ಆದಿವಾಸಿ ಜನತೆಯ ಸ್ವಂತ ಭೂಮಿ ಹೊಂದುವ ಕನಸು ನನಸಾಗಿಲ್ಲ ಎಂದು ದೂರಿ ಧರಣಿ ಆಯೋಜಿಸಲಾಗಿದೆ. ಸಂಘಟನೆ ಮುಖಂಡ ಪಿ.ಕೆ ರಾಮನ್ ಧರಣಿ ಉದ್ಘಾಟಿಸಿ ಮಾತನಾಡಿ, ಆದಿವಾಸಿ ಸಮುದಾಯದ ವಿರುದ್ಧ ಸರ್ಕಾರ ತೋರುವ ನಿರ್ಲಕ್ಷ್ಯ ಧೋರಣೆ ಕೈಬಿಡದಿದ್ದಲ್ಲಿ ಪ್ರಬಲ ಹೋರಾಟ ಅನಿವಾರ್ಯವಾಗಲಿದೆ. ಸರ್ಕಾರದ ಭರವಸೆಯನ್ವಯ ಶೀಘ್ರ ಜಾಗ ಮಂಜೂರುಮಾಡಿಕೊಡಲು ಮುಂದಾಗಬೇಕು ಎಂದು ತಿಳಿಸಿದರು.
ಆದಿವಾಸಿ ಸಮುದಾಯದ ಪ್ರತಿ ಕುಟುಂಬಕ್ಕೆ 50ಸೆಂಟ್‍ಗೆ ಕಡಿಮೆಯಾಗದಂತೆ ಭೂಮಿ ವಿತರಿಸಬೇಕು, ಅರ್ಜಿದಾರರು ಈಗಾಗಲೇ ಗುರುತಿಸಿರುವ ಭೂಮಿ ಅವರಿಗೆ ನೀಡಬೇಕು, ಆರುವರ್ಷ ಹಿಂದೆ ಸಲ್ಲಿಸಿದ ಎಲ್ಲ ಅರ್ಜಿದಾರರಿಗೂ ಭೂಮಿ ಮಂಜೂರುಗೊಳಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಯಿತು.