ನವದೆಹಲಿ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಜಂಟಿ ಆರ್ಥಿಕ ಯೋಜನೆಗಳ ಅನ್ವೇಷಣೆ ಮತ್ತು ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಶನಿವಾರ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಚರ್ಚಿಸಿದರು.
ಪರಸ್ಪರ ಹಿತಾಸಕ್ತಿಯ ಅಂತಾರಾಷ್ಟ್ರೀಯ ವಿಷಯಗಳನ್ನೊಳಗೊಂಡ ಚರ್ಚೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು.ಜನರ ನಡುವಿನ ಸಂಬಂಧ ಹೆಚ್ಚಿಸುವುದು, ಪ್ರವಾಸೋದ್ಯಮ ಉತ್ತೇಜಿಸುವುದು ಮತ್ತು ಸಂಪರ್ಕ ಸುಧಾರಿಸುವ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಇಬ್ಬರೂ ಪ್ರಧಾನಿಗಳು ಭಯೋತ್ಪಾದನೆ ನಿಗ್ರಹ ಮತ್ತು ಸಾಗರ ಭದ್ರತೆಗಾಗಿ ಸಹಕಾರ ಕುರಿತು ಚರ್ಚಿಸಿದರು. ಶ್ರೀಲಂಕಾ ತಮಿಳರ ಜೊತೆ ಶ್ರೀಲಂಕಾ ಸರ್ಕಾರ ಶಾಂತಿ ಸಂಧಾನ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಮೋದಿ ಆಶಿಸಿದರು.ಶ್ರೀಲಂಕಾ ಸರ್ಕಾರ, ಶ್ರೀಲಂಕಾದಲ್ಲಿನ ತಮಿಳರ ಸಮಾನತೆ, ನ್ಯಾಯ, ಶಾಂತಿ ಆಶೋತ್ತರಗಳನ್ನು ಸಾಕಾರಗೊಳಿಸುತ್ತದೆ ಎಂದು ವಿಶ್ವಾಸ ತಮಗಿದೆ. ಶ್ರೀಲಂಕಾ ಸರ್ಕಾರ ಶಾಂತಿ ಸಂಧಾನ ಪ್ರಕ್ರಿಯೆ ಆರಂಭಗೊಳಿಸುವತ್ತ ಕೆಲಸ ಮಾಡುವ ವಿಶ್ವಾಸವಿದೆ ಎಂದು ಮೋದಿ ಹೇಳಿದ್ದಾರೆ.ಶ್ರೀಲಂಕಾ ನೌಕಾಪಡೆಯಿಂದ ಆಗಾಗ್ಗೆ ಬಂಧಿಸಲ್ಪಡುವ ಭಾರತೀಯ ಮೀನುಗಾರರ ಸಮಸ್ಯೆಯ ಬಗ್ಗೆಯೂ ಮೋದಿ ಚರ್ಚಿಸಿದ್ದಾರೆ. ಮೀನುಗಾರರ ಸಮಸ್ಯೆಯನ್ನು ಪರಿಹರಿಸುವಲ್ಲಿ ಎರಡೂ ದೇಶಗಳು ಮಾನವೀಯ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿವೆ ಎಂದು ಮೋದಿ ಹೇಳಿದರು.ಇದಕ್ಕೂ ಮೊದಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಿದರು.ಅಭಿವೃದ್ಧಿ, ಪ್ರಗತಿ ಮತ್ತು ಭದ್ರತೆಯಲ್ಲಿ ಶ್ರೀಲಂಕಾ ಪಾಲುದಾರ ದೇಶವಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.ಹಲವಾರು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಯೋಜನೆಗಳು ತ್ವರಿತಗೊಳಿಸುವುದು ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಲಾಯಿತು ಎಂದು ರಾಜಪಕ್ಸೆ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಇಲ್ಲಿಗೆ ಆಗಮಿಸಿದ ರಾಜಪಕ್ಸೆ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಶನಿವಾರ ಬೆಳಿಗ್ಗೆ ಭವ್ಯ ಸ್ವಾಗತ ಕೋರಲಾಯಿತು.