ಮಂಗಳೂರು: ಮಾರಣಾಂತಿಕ ಕೊರೋನಾ ವೈರಾಣು ಸೋಂಕಿನ ಪ್ರಕೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಜೋಡಿಯೊಂದು ತಮ್ಮ ವಿವಾಹವನ್ನು ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಕಾರಣ, ವಿವಾಹವಾಗಿದ್ದ ವರ ಗೌರವ್ 'ವಲ್ರ್ಡ್ ಡ್ರೀಮ್' ಎಂಬ ಹಡಗೊಂದರಲ್ಲಿ ಉದ್ಯೋಗದಲ್ಲಿದ್ದು, ಕೊರೋನಾ ವೈರಸ್ ಹಿನ್ನೆಲೆಯಲ್ಲಿ ತನ್ನ ಸಿಬ್ಬಂದಿಯೊಂದಿಗೆ ತೈವಾನ್ ನಲ್ಲಿ ಸಿಲುಕಿದ್ದಾರೆ.ಮಂಗಳೂರಿನಲ್ಲಿ ಫೆ. 10ರಂದು ನಡೆಯಬೇಕಿದ್ದ ವಿವಾಹಕ್ಕೆ ಆಗಲೇ ತಯಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಗೌರವ್ ತವರಿಗೆ ಆಗಮಿಸಬೇಕಿತ್ತು. ಜ. 26ರಂದು ಚೀನಾದಿಂದ ಹೊರಟ ಹಡಗು ಫೆ. 5ರಂದು ಥೈವಾನ್ ತಲುಪಬೇಕಿತ್ತು. ಆದರೆ, ಥೈವಾನ್ ನಲ್ಲಿ ಹಡಗು ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ಇದರಿಂದ ಹಡಗನ್ನು ಮರಳಿ ಹಾಂಗ್ ಕಾಗ್ ಗೆ ಕರೆದೊಯ್ಯಬೇಕಾಯಿತು. ಈಗ ಎಲ್ಲಾ ಸಿಬ್ಬಂದಿ, ಪ್ರಯಾಣಿಕರನ್ನು ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಗುತ್ತಿದೆ.ಹಾಂಕಾಂಗ್, ಸಿಂಗಾಪುರ, ಥೈವಾನ್ ನಡುವೆ ಸಂಚರಿಸುವ ಹಡಗಿನಲ್ಲಿ ಒಟ್ಟು 1,700 ಪ್ರಯಾಣಿಕರಿದ್ದು ಇದರಲ್ಲಿ ಹಲವರಿಗೆ ಕೊರೋನಾ ವೈರಸ್ ತಗುಲಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಗೌರವ್ ಕುಟುಂಬ "ನಾವು ಆರು ತಿಂಗಳ ಹಿಂದೆಯೇ ಮದುವೆ ನಿಶ್ಚಯಿಸಿದ್ದೆವು. ಆದರೆ ಅಲ್ಲಿನ ಸರ್ಕಾರ ಹುಡುಗನನ್ನು ಕಳಿಸಲು ಅನುಮತಿಸಿಲ್ಲ. ಹಾಗಾಗಿ ಸರ್ಕಾರದ ಆದೇಶ ಪಾಲನೆ ಮಾಡುವುದು ಕ್ರೂಸ್ ಸಿಬ್ಬಂದಿ ಕರ್ತವ್ಯವಾಗಿದ್ದು ಗೌರವ್ ಅಲ್ಲಿಯೇ ಉಳಿಯಲಿದ್ದಾನೆ" ಎಂದರು.
ನಿನ್ನೆ ಮೆಹಂದಿ ಕಾರ್ಯಕ್ರಮ ನಡೆಯಬೇಕಿತ್ತು. ಸೋಮವಾರ ಮದುವೆ ಇತ್ತು. ಆದರೆ ಈಗ ಅದನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ. ಗೌರವ್ ದಿನಕ್ಕೆ ನಾಲ್ಕು ಬಾರಿ ತನ್ನ ಕುಟುಂಬದವರೊಡನೆ ದೂರವಾಣಿ ಮೂಲಕ ಮಾತನಡುತ್ತಾನೆ. ಇದಾಗಲೇ ನಾಲ್ಕು ಬಾರಿ ವೈದ್ಯಕೀಯ ಪರೀಕ್ಷೆ ನಡೆದಿದ್ದು ಎಲ್ಲಾ ಬಾರಿಯೂ ಸೋಂಕು ತಗುಲಿಲ್ಲ (ನೆಗೆಟಿವ್) ಎಂದು ವರದಿ ಸಿಕ್ಕಿದೆ. ಸಧ್ಯ ಯುವಕ, ಯುವತಿಯ ಕುಟುಂಬ ಗೌರವ್ ಕ್ಷೇಮವಾಗಿ ಭಾರತಕ್ಕೆ ಬರಲೆಂದು ಹಾರೈಸುತ್ತಿದೆ.