ಪೆರ್ಲ: ಭಾರತವು ಅಳವಡಿಸಿಕೊಂಡಿರುವ ಆಧ್ಯಾತ್ಮಿಕ ಚಿಂತನೆಯಿಂದ ಪ್ರಪಂಚದಲ್ಲೇ ಶಕ್ತಿಯುತವಾಗಿ ಗುರುಸ್ಥಾನದಲ್ಲಿ ಹೊರಹೊಮ್ಮುತ್ತಿದೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಹಿಂದೂ ಧರ್ಮ ಎಂಬುದು ಭಿನ್ನ ಅಡಿಪಾಯದ ಸನಾತನ ಹಾಗೂ ನಿರಂತರ ಧರ್ಮವಾಗಿದೆ.ಎಲ್ಲಾ ಧರ್ಮಗಳಿಗೂ ಓರ್ವ ಪ್ರತಿ ಪಾದಕ ಇದ್ದರೆ ಹಿಂದೂ ಧರ್ಮಕ್ಕೆ ಪ್ರತಿಪಾದಕ ಇಲ್ಲ.ಚರಾಚರ ವಸ್ತುಗಳಲ್ಲೂ ದೇವರನ್ನು ಕಾಣುವ, ಮೂಲ ತತ್ವಗಳಿಗೆ ಅಪಚಾರ ವಾಗದ ರೀತಿಯಲ್ಲಿ ಬದಲಾವಣೆ ತರುವ ಏಕೈಕ ಧರ್ಮ ಹಿಂದೂ ಧರ್ಮವಾಗಿದೆ.ಹಿಂದು ಧರ್ಮವು ದೇವರು, ದೈವ ಹೊರತಾಗಿ ಮನುಷ್ಯರಾಗಿ ಜನ್ಮ ತಾಳಿದ ಯುಗ ಪುರುಷರನ್ನೂ ದೇವರಂತೆ ಕಾಣುತ್ತಿದೆ.ದೇವರನ್ನು ಒಪ್ಪದವ ಅತಿ ಮಾನುಷ ಶಕ್ತಿಯನ್ನು ಒಪ್ಪಿಕೊಳ್ಳುವ ಕಾರಣದಿಂದ ಅವರು ನಾಸ್ತಿಕರಾಗಿ ಉಳಿದಿಲ್ಲ.ಧರ್ಮ ವಿರಹಿಯಾಗಿ ಜೀವನ ನಡೆಸಿದಲ್ಲಿ ಜೀವನ ಅರ್ಥ ಪೂರ್ಣವಾಗದು ಎಂದು ತಿಳಿಸಿದರು.
ನಿವೃತ್ತ ಪತ್ರಕರ್ತ ನಿತ್ಯಾನಂದ ಪಡ್ರೆ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ಹಿರಿಯರು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವೆಂಬ ನಾಲ್ಕು ಶಬ್ದಗಳಲ್ಲಿ ಜೀವನಕ್ಕೊಂದು ದಿಗ್ದರ್ಶನ ನೀಡಿದ್ದಾರೆ.ಅರ್ಥ ಎಂದರೆ ಸಂಪತ್ತು, ಆಸ್ತಿ, ಮನೆ ಅಂತಸ್ತುಗಳು.ಕಾಮವೆಂದರೆ ಅತಿಯಾದ ಆಸೆ, ಆಕರ್ಷಣೆ ಅರ್ಥ-ಕಾಮಗಳಿಗೆ ಹಿಡಿತ ಅತ್ಯಗತ್ಯ.ಧರ್ಮವನ್ನು ಅರಿತು ಅದರ ಎಲ್ಲೆಯನ್ನು ಮೀರದೇ ಮುಂದೆ ಸಾಧಿಸಬೇಕಾದ ಮೋಕ್ಷಕ್ಕೆ ಬಾಧಕವಾಗದಂತೆ ಧರ್ಮಮಾರ್ಗದಲ್ಲಿ ಅರ್ಥ-ಕಾಮ ಸಂಪಾದಿಸಬೇಕು.ಧರ್ಮದ ಎಲ್ಲೆ ಮೀರಿದರೆ ಖಂಡಿತವಾಗಿಯೂ ದುಃಖ ಅನುಭವಿಸ ಬೇಕಾಗಿ ಬರುವುದು.ಇಡಿಯಡ್ಕ ದೇವಾಲಯದಲ್ಲಿ ಎಲ್ಲಾ ಕಾರ್ಯಕರ್ತರೂ ಅವರವರ ಕೆಲಸ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ, ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಕೆಲಸಗಳನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಮಾಡಿದಲ್ಲಿ ದೇವರನ್ನು ಆರಾಧಿಸಿದ ಅದೇ ಫಲ ಲಭಿಸುವುದು ಎಂದರು.
ಡಾ.ವಿಷ್ಣುಪ್ರಸಾದ ಬರೆಕೆರೆ ಅಧ್ಯಕ್ಷತೆ ವಹಿಸಿದ್ದರು. ದೇವಳದ ಆಡಳಿತ ಮಂಡಳಿ ಉಪಾಧ್ಯಕ್ಷ ರಮಾನಾಥ ರೈ ಕಡಾರು ಉಪಸ್ಥಿತರಿದ್ದರು.ವೇದಿಕೆಯ ಉಪಸ್ಥಿತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ವಿದ್ಯಾರ್ಥಿನಿ ಸುಮಶ್ರೀ ಪ್ರಾರ್ಥಿಸಿದರು.ದೇವಳದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಸದಾನಂದ ರೈ ಕುದ್ವ ಸ್ವಾಗತಿಸಿದರು.ನಿವೃತ್ತ ಶಿಕ್ಷಕ ಡಾ.ಸದಾಶಿವ ಭಟ್ ಸರವು ವಂದಿಸಿದರು.ಉದಯ ಸ್ವರ್ಗ ನಿರೂಪಿಸಿದರು.