ಕಾಸರಗೋಡು: ಬಿಜೆಪಿಯ ಸ್ಥಳೀಯ ಮಟ್ಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಪುಷ್ಠಿಯೆಂಬಂತೆ ನಾಟಕೀಯ ಬೆಳವಣಿಗೆಗಳು ಸಂಭವಿಸುತ್ತಿದ್ದು, ನೇತಾರ ಕುಂಟಾರು ರವೀಶ ತಂತ್ರಿ ಮುನಿಸಿಕೊಂಡಿರುವುದಾಗಿ ತಿಳಿದುಬಂದಿದ್ದು, ರಾಜಕೀಯದಿಂದ ನಿವೃತ್ತರಾಗುವ ಬಗ್ಗೆ ಚಿಂತಿಸಿರುವುದಾಗಿ ಆಪ್ತ ವಲಯಗಳು ದೃಢಪಡಿಸಿವೆ.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷರನ್ನಾಗಿ ವಕೀಲ ಕೆ. ಶ್ರೀಕಾಂತ್ ಅವರನ್ನು ನೇಮಿಸುತ್ತಿದ್ದಂತೆ ಜಿಲ್ಲಾ ಸಮಿತಿ ಪದಾಧಿಕಾರಿಗಳಲ್ಲಿ ಅಸಮಧಾನ ಬಹಿರಂಗಗೊಂಡಿದ್ದು, ಬಿಜೆಪಿ ಮುಖಂಡ, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದಾರೆ.
ಪಕ್ಷದ ರಾಜ್ಯ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯಲಿದ್ದೇನೆ. ರಾಜೀನಾಮೆ ಪತ್ರವನ್ನು ಫೆಬ್ರವರಿ 24ರಂದು ರಾಜ್ಯ ಸಮಿತಿ ಅಧ್ಯಕ್ಷರಾದ ಕೆ. ಸುರೇಂದ್ರನ್ ಅವರಿಗೆ ಕಳುಹಿಸಿಕೊಡುವುದಾಗಿ ರವೀಶ ತಂತ್ರಿ ಕುಂಟಾರು ತಿಳಿಸಿದ್ದಾರೆ. ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರವೀಶ ತಂತ್ರಿ ಅವರ ಹೆಸರೂ ಕೇಳಿ ಬಂದಿದ್ದು, ಅಂತಿಮ ಹಂತದಲ್ಲಿ ಹಾಲಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರನ್ನು ಮರು ನೇಮಕವಾಗಿದೆ. ಕಾಸರಗೋಡು ವಿಧಾನಸಭಾ ಕ್ಷೇತ್ರ, ಬಳಿಕ ನಡೆದ ಕಾಸರಗೋಡು ಲೋಕಸಭಾ ಕ್ಷೇತ್ರ ಹಾಗೂ ಇತ್ತೀಚೆಗೆ ನಡೆದ ಮಂಜೇಶ್ವರ ವಿಧಾನಸಭಾ ಉಪಚುನಾವಣೆಯಲ್ಲಿ ರವೀಶ ತಂತ್ರಿ ಕುಂಟಾರು ಅವರು ಸ್ಪರ್ಧಿಸಿದ್ದರು.
ರಾಜ್ಯ ಕಾರುಬಾರು:
ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಶನಿವಾರವಷ್ಟೇ ಕೆ.ಸುರೇಂದ್ರನ್ ಅಧಿಕಾರ ವಹಿಸಿದ್ದರು. ಈ ಸಂದರ್ಭ ಬಿಜೆಪಿಯ ಒಂದು ಬಣ ಹೊರಗುಳಿದಿದ್ದು, ಬಹಿರಂಗ ಹೇಳಿಕೆಗಳ ಮೂಲಕ ಸುರೇಂದ್ರನ್ ಅವರ ನೇಮಕವನ್ನು ಪ್ರಶ್ನಿಸಿದ್ದರು. ಈ ಮಧ್ಯೆ ಇದೀಗ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದ ಘೋಷಣೆಯೂ ವಿವಾದವಾಗುತ್ತಿದೆ. ನ್ಯಾಯವಾದಿ ಕೆ.ಶ್ರೀಕಾಂತ್ ಅವರಿಗೆ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹಾಗೂ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಸಂಪೂರ್ಣ ಬೆಂಬಲ ಇದೆ ಎಂದು ತಿಳಿದುಬಂದಿದ್ದು, ಕುಮ್ಮನಂ ರಾಜಶೇಖರನ್ ಸಹಿತ ಸಂಘ ಪರಿವಾರ ತಂತ್ರಿಯವರನ್ನು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿತ್ತೆಂದು ತಿಳಿದುಬಂದಿದೆ. ಆದರೆ ಕೊನೆಗೂ ಎಣಿಸದಂತೆ ಆಗದಿರುವುದರಿಂದ ಬಂಡಾಯದ ಮಾತುಗಳು ಕೇಳಿಬಂದಿತೆಂದು ಮೂಲಗಳಿಂದ ತಿಳಿದುಬಂದಿದೆ.